ಮಂಗಳೂರು : ಅಪಾರ್ಟ್ಮೆಂಟ್‌ನಲ್ಲಿ ಪಾರ್ಕಿಂಗ್ ಕೊಡದೆ ಮೋಸ – ಐವರು ಬಿಲ್ಡರ್‌ಗಳಿಗೆ ಮೂರು ವರ್ಷ ಕಾರಾಗೃಹ ಶಿಕ್ಷೆ

ಮಂಗಳೂರು : ನಗರದ ಗ್ರಾಹಕ ನ್ಯಾಯಾಲಯ ಗ್ರಾಹಕರೊಬ್ಬರ ಪರವಾಗಿ ನೀಡಿರುವ ಆದೇಶವನ್ನು ಪಾಲಿಸದ ಹಿನ್ನೆಲೆಯಲ್ಲಿ ಮಂಗಳೂರಿನ ಹೆಸರಾಂತ ರಿಯಲ್ ಎಸ್ಟೇಟ್ ಸಂಸ್ಥೆಯ ಐವರು ಬಿಲ್ಡರ್‌ಗಳಿಗೆ ಮೂರು ವರ್ಷ ಕಾರಾಗೃಹ ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ನೀಡುವಂತೆ ಆದೇಶಿಸಿದೆ. ನಗರದ ರಾಮ್ ಭವನದಲ್ಲಿ ಕಚೇರಿ ಹೊಂದಿರುವ ನಗರದ ಮಾರಿಯನ್ ಇನ್ಸಾಸ್ಪಕ್ಟರ್ ಸಂಸ್ಥೆಯ ಪಾಲುದಾರರು ಉಜ್ವಲ್‌ ಡಿಸೋಜ ಮತ್ತು ನವೀನ್ ಕಾರ್ಡೋಜ ಹಾಗೂ ಅವರೊಂದಿಗೆ ಅಭಿವೃದ್ಧಿ ಕಾರ್ಯದಲ್ಲಿ ಪಾಲುದಾರಿಕೆ ಹೊಂದಿರುವ ವಿಲಿಯಂ ಸಲ್ದಾನ್ಹ, ಗಾಯತ್ರಿ ಮತ್ತು ಲೂಸಿ ಸಲ್ದಾನ್ಹ ಶಿಕ್ಷೆಗೊಳಗಾದವರು. 2013ರಲ್ಲಿ ಮಂಗಳೂರಿನ ಗುಜ್ಜರಕೆರೆ ಎಂಬಲ್ಲಿ ಬಹುಮಹಡಿ ಅಪಾರ್ಟೆಂಟ್ ನಲ್ಲಿ ಫ್ಲಾಟ್ ವೊಂದನ್ನು ಕಾರ್ ಪಾರ್ಕಿಂಗ್ ಸಹಿತ 40 ಲಕ್ಷ ರೂ.ಗೆ ಖರೀದಿಸಲು ಒಪ್ಪಂದ ಮಾಡಿ ಡಾ.ಲವೀನಾ ಹಣ ನೀಡಿದ್ದರು. ಹಣ ಪಡೆದ ಬಳಿಕ ನೀಡಿರುವ ಮಾರಾಟ ಪತ್ರದಲ್ಲಿ ಈ ಹಿಂದೆ ಒಪ್ಪಿರುವಂತೆ ಆರೋಪಿಗಳು ಕಾರು ಪಾರ್ಕಿಂಗ್ ಸೌಲಭ್ಯ ನೀಡಿರಲಿಲ್ಲ. ಆಗ ಅವರು ಆರೋಪಿಗಳನ್ನು ಭೇಟಿ ಮಾಡಿ ಕಾರು ಪಾರ್ಕಿಂಗ್ ಒದಗಿಸುವಂತೆ ವಿನಂತಿಸಿದ್ದಾರೆ. ಇದಕ್ಕೆ ಆರೋಪಿಗಳು ನಿರಾಕರಿಸಿದ್ದು, ನೋಟಿಸ್ ನೀಡಿದರೂ ಬಗ್ಗಲಿಲ್ಲ. ಆದ್ದರಿಂದ ಲವೀನಾ 2014ರಲ್ಲಿ ಮಂಗಳೂರಿನ ಗ್ರಾಹಕ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದರು. ಗ್ರಾಹಕ ನ್ಯಾಯಾಲಯ ಲವೀನಾ ದೂರಿನ ವಿಚಾರಣೆ ನಡೆಸಿ 2017 ಜೂನ್ 24ರಂದು ಅಂತಿಮ ತೀರ್ಪನ್ನು ಪ್ರಕಟಿಸಿ ಆರೋಪಿಗಳು ಸೇವಾ ನ್ಯೂನ್ಯತೆ ಮಾಡಿದ್ದು, ದೂರುದಾರರಿಗೆ ಕಾರ್ ಪಾರ್ಕಿಂಗ್ ಮತ್ತು 50,000 ರೂ. ಪರಿಹಾರ ಹಾಗೂ 10,000 ರೂ. ಪ್ರಕರಣದ ಖರ್ಚನ್ನು ನೀಡುವಂತೆ ಆದೇಶಿತ್ತು. ಈ ಆದೇಶವನ್ನು ಪ್ರಶ್ನಿಸಿ ಆರೋಪಿಗಳು ರಾಜ್ಯ ಗ್ರಾಹಕ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಆದರೆ ರಾಜ್ಯ ನ್ಯಾಯಾಲಯ ಆರೋಪಿಗಳ ಮನವಿಯನ್ನು ತಿರಸ್ಕರಿಸಿ ಜಿಲ್ಲಾ ಗ್ರಾಹಕ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿತ್ತು. ಆದರೂ ಆರೋಪಿಗಳು ದೂರುದಾರರಿಗೆ ಪಾರ್ಕಿಂಗ್‌ ಸೌಲಭ್ಯ ಕೊಡಲಿಲ್ಲ. ಆದ್ದರಿಂದ ದೂರುದಾರರು ಸೆಪ್ಟೆಂಬರ್ 2022ಕ್ಕೆ ಮತ್ತೆ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿದ ಕಾರಣ ಆರೋಪಿಗಳಿಗೆ ಮೂರು ವರ್ಷ ಕಾರಾಗೃಹ ಸಜೆ ಮತ್ತು ಒಂದು ಲಕ್ಷ ದಂಡ ಪಾವತಿಸುವಂತೆ ಆದೇಶಿಸಿದೆ.

Check Also

ಕೇರಳದಲ್ಲಿ ‘ವೆಸ್ಟ್‌ ನೈಲ್’ ಜ್ವರದ ಆತಂಕ- ದ.ಕ. ಜಿಲ್ಲೆಯಲ್ಲೂ ವಿಶೇಷ ನಿಗಾ

ಮಂಗಳೂರು: ನೆರೆಯ ಕೇರಳದ ಮಲಪ್ಪುರಂ, ಕೋಯಿಕ್ಕೋಡ್, ತೃಶೂರ್ ಪ್ರದೇಶದಲ್ಲಿ ‘ವೆಸ್ಟ್ ನೈಲ್’ ಜ್ವರ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ …

Leave a Reply

Your email address will not be published. Required fields are marked *

You cannot copy content of this page.