ಹುಬ್ಬಳ್ಳಿ, ನವೆಂಬರ್17: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಹಾಗೂ ಭಾರತೀಯ ಜನತಾ ಪಕ್ಷದ ಹಿರಿಯ ನಾಯಕ ಡಿ.ಕೆ. ಚವ್ಹಾಣ ತಮ್ಮ 75ರ ಇಳಿ ವಯಸ್ಸಿನಲ್ಲಿ ಮತ್ತೊಂದು ಮದುವೆಯಾಗಿದ್ದಾರೆ. ತಮ್ಮ ಪತ್ನಿ ಶಾರದಾ ಅವರ ಸಹೋದರಿ ಅನುಸೂಯಾ ಅವರನ್ನು ಡಿ.ಕೆ.
ಚವ್ಹಾಣ ಕೈ ಹಿಡಿದಿದ್ದಾರೆ.
75ನೇ ವಯಸ್ಸಿನಲ್ಲಿ ಮದುವೆಯಾಗಿರುವ ಡಿ.ಕೆ. ಚವ್ಹಾಣ, ಮೃತಪಟ್ಟ ತಮ್ಮ ಮೊದಲ ಪತ್ನಿಯ ಸಹೋದರಿಯನ್ನೇ ವಿವಾಹವಾಗಿರುವುದು ವಿಶೇಷವಾಗಿದೆ. ಈ ಮೂಲಕ ಚವ್ಹಾಣ ಎರಡನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಮಾಜಿ ಮೇಯರ್ ಡಿ.ಕೆ. ಚವ್ಹಾಣ ಮದುವೆ ಹುಬ್ಬಳ್ಳಿಯಲ್ಲಿ ನಡೆದಿದ್ದು, ಕುಟುಂಬಸ್ಥರ ಸಮ್ಮುಖದಲ್ಲಿ ಶಾಸ್ತ್ರೋಕ್ತವಾಗಿ ಅದ್ಧೂರಿಯಾಗಿ ನಡೆದಿದೆ. ಚವ್ಹಾಣ ವಿವಾಹ ಸಂಭ್ರಮದಲ್ಲಿ ಮೂವರು ಮಕ್ಕಳು, ಸೊಸೆಯಂದಿರು ಹಾಗೂ ಮೊಮ್ಮಕ್ಕಳು ಸೇರಿದಂತೆ ಸಂಬಂಧಿಕರು ಭಾಗಿಯಾಗಿದ್ದರು.
ಡಿ.ಕೆ. ಚವ್ಹಾಣ ಮೊದಲ ಪತ್ನಿ ಶಾರದಾ ಕಳೆದ ಮೂರು ತಿಂಗಳ ಹಿಂದೆ ಮೃತಪಟ್ಟರು. ಪತ್ನಿ ಅಗಲಿದ ಮೂರು ತಿಂಗಳ ನಂತರ ಪತ್ನಿಯ ಸಹೋದರಿ ಅನಸೂಯಾ ಅವರನ್ನು ಮದುವೆಯಾಗಿದ್ದಾರೆ. ಡಿ.ಕೆ. ಚವ್ಹಾಣ ಅವರಿಗೆ ಇದು ಎರಡನೇ ಮದುವೆಯಾದರೆ. ಅನಸೂಯಾ ಅವರಿಗೆ ಇದು ಮೊದಲ ಮದುವೆಯಾಗಿದೆ.
ಮೃತ ಮೊದಲ ಪತ್ನಿಯ ಮಕ್ಕಳು ಉದ್ಯೋಗದ ನಿಮಿತ್ತ ಬೇರೆ-ಬೇರೆ ಕಡೆಗಳಲ್ಲಿ ಇದ್ದಾರೆ. ಇದರಿಂದ ಮಾಜಿ ಮೇಯರ್ ಡಿ.ಕೆ. ಚವ್ಹಾಣ ಅವರು ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದರು. ಇಳಿ ವಯಸ್ಸಿನಲ್ಲಿ ಜೊತೆಯಾಗಿರಲು ಮಕ್ಕಳು ಹಾಗೂ ಸಂಬಂಧಿಕರು ಸೇರಿ ಮಾತುಕತೆ ನಡೆಸಿ ಎಲ್ಲರ ಒಪ್ಪಿಗೆ ಮೇರೆಗೆ ಚವ್ಹಾಣ ಅವರಿಗೆ ಮತ್ತೊಂದು ಮದುವೆ ಮಾಡಿಸಿದ್ದಾರೆ.
ಸಹಸ್ರಾರ್ಜುನ ಕ್ಷತ್ರಿಯ (ಎಸ್ ಎಸ್ ಕೆ) ಸಮಾಜಕ್ಕೆ ಸೇರಿರುವ ಡಿ.ಕೆ. ಚವ್ಹಾಣ ಅವರ ಮನೆಯೆ ಹಿಂದೆ ಮೊದಲ ಪತ್ನಿ ತವರು ಮನೆಯಿದ್ದು, ತನ್ನ ಮುದ್ದಿನ ತಂಗಿ ಅನಿರೀಕ್ಷಿತವಾಗಿ ಸಾವನ್ನಪ್ಪಿದ ಬಳಿಕ ಅಕ್ಕ ಅನಸೂಯಾ ಬಹಳ ನೊಂದಿದ್ದರು. ಅಲ್ಲದೇ ಡಿ.ಕೆ.ಚವ್ಹಾಣ ಅವರನ್ನು ಒಬ್ಬಂಟಿಯಾಗಿ ಬಿಟ್ಟರು ಎಂಬ ಮಾತುಗಳು ಸಹ ಕೇಳಿಬಂದವು. ಹೀಗಾಗಿ ಸಮಾಜದ ಹಿರಿಯರು ಇಳಿವಯಸ್ಸಿನಲ್ಲಿ ಇಬ್ಬರು ಒಬ್ಬರಿಗೊಬ್ಬರು ಆಸರೆಯಾಗಿರಲಿ ಎಂದು ಮೂರು ಗಂಟು ಹಾಕಿಸಿ ಅಕ್ಷತೆ ಕಾಳು ಹಾಕಿದ್ದಾರೆ.