ಮಂಗಳೂರು : ಕಾಂತಾರ ಚಿತ್ರ 50ನೇ ದಿನ ಪೂರೈಸಿದ ದಾಖಲೆ ಬರೆಯುತ್ತಿರುವ ಬೆನ್ನಲ್ಲೇ ಕಾಂತಾರದ ನಟಿ ಲೀಲಾ ಇದೀಗ ಕರಾವಳಿಯ ದೈವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ.
ಮಂಗಳೂರಿನ ಕಲ್ಲಾಪು ಬಳಿಯ ಬುರ್ದುಗೋಳಿಯ ಗುಳಿಗ ದೈವಸ್ಥಾನ, ಕೊರಗ ತನಿಯ ದೈವಗಳ ಉದ್ಭವ ಶಿಲೆಯ ಆದಿಸ್ಥಳ ಹಾಗೂ ಈ ಭಾಗದ ಕೆಲವು ದೈವಸ್ಥಾನಗಳಿಗೆ ಭೇಟಿ ನೀಡಿದ್ದಾರೆ. ಕುಟುಂಬ ಸದಸ್ಯರು, ಸಿನಿಮಾದ ಸಹನಟರು ಹಾಗೂ ಸ್ನೇಹಿತರೊಂದಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಬುರ್ದುಗೋಳಿ ಆದಿಸ್ಥಳ ಕ್ಷೇತ್ರದ ಸಮಿತಿ ಅಧ್ಯಕ್ಷರಾದ ವಿಶ್ವನಾಥ್ ನಾಯ್ಕ್ ಅವರು ಸಪ್ತಮಿ ಗೌಡ ಅವರನ್ನ ಬರಮಾಡಿ ಕ್ಷೇತ್ರದ ಐತಿಹ್ಯವನ್ನ ತಿಳಿಸಿದರು.
ಈ ವೇಳೆ ಮಾತನಾಡಿದ ಸಪ್ತಮಿ ಗೌಡ, ವಿಶ್ವದಾದ್ಯಂತ ಕಾಂತಾರ ಸದ್ದು ಮಾಡುತ್ತಿದೆ. ಸಿನಿಮಾ ನಿರ್ಮಾಣದ ವೇಳೆ ಕರಾವಳಿ ಭಾಗದ ಆಚರಣೆ, ಸಂಸ್ಕೃತಿ, ದೈವಾರಾಧನೆ ಬಗ್ಗೆ ನಾನು ತಿಳಿದುಕೊಂಡೆ. ಇತ್ತೀಚಿಗೆ ನಡೆದ ವೈಯಕ್ತಿಕ ಘಟನೆಯೊಂದು ದೈವಗಳ ಬಗ್ಗೆ ಹುಟ್ಟಿದ ನಂಬಿಕೆ ಗಟ್ಟಿಯಾಗುವಂತೆ ಮಾಡಿದೆ.
ಈಗಾಗಲೇ ಸಿನಿಮಾಗಳಲ್ಲಿ ನಟಿಸಲು ಸಾಕಷ್ಟು ಅವಕಾಶಗಳು ಬಂದಿದ್ದು, ಸ್ಕ್ರಿಪ್ಟ್ ರೀಡಿಂಗ್ ನಡೀತಾ ಇದೆ. ಜನರ ಪ್ರೀತಿಯಿಂದ ಜಗತ್ತಿನಾದ್ಯಂತ ಕಾಂತಾರ ಹೌಸ್ ಫುಲ್ ಆಗಿ ಓಡುತ್ತಿದ್ದು, ತುಳುನಾಡಿನ ದೈವಗಳ ಆಶೀರ್ವಾದವೇ ಚಿತ್ರಕ್ಕೆ ಶ್ರೀರಕ್ಷೆ ಎಂದರು. ಜಗತ್ತಿನಾದ್ಯಂತ ಕಾಂತಾರ ಚಿತ್ರವು ಹೌಸ್ ಫುಲ್ ಪ್ರದರ್ಶನದೊಂದಿಗೆ 50 ದಿವಸ ಪೂರೈಸುತ್ತಿದ್ದು, ಚಿತ್ರದ ಅದ್ಭುತ ಯಶಸ್ಸಿಗೆ ದೈವಗಳ ಆಶೀರ್ವಾದವೇ ಕಾರಣ ಎಂದರು.