ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ಮುಂಬೈ-ಅಹಮದಾಬಾದ್ ಹೆದ್ದಾರಿಯಲ್ಲಿ ಶನಿವಾರ ಬೆಳಿಗ್ಗೆ ಹತ್ತು ತಿಂಗಳ ಹೆಣ್ಣು ಮಗುವನ್ನು ಕ್ಯಾಬ್‌ನಿಂದ ಹೊರ ಎಸೆದು, ಆಕೆಯ ತಾಯಿಗೆ ಕಿರುಕುಳ ನೀಡಿರುವ ಘಟನೆ ನಡೆದಿದೆ.
ಏನಿದು ಘಟನೆ?
ಮಹಿಳೆ ಮತ್ತು ಆಕೆಯ ಹತ್ತು ತಿಂಗಳ ಮಗಳು ಪೆಲ್ಹಾರ್‌ನಿಂದ ವಾಡಾ ತಹಸಿಲ್‌ನ ಪೊಶೆರೆಗೆ ಕ್ಯಾಬ್‌ನಲ್ಲಿ ಹಿಂತಿರುಗುತ್ತಿದ್ದರು. ಈ ವೇಳೆ ಕ್ಯಾಬ್ ಚಾಲಕ ಮತ್ತು ಕೆಲವು ಸಹ ಪ್ರಯಾಣಿಕರು ಮಹಿಳೆಗೆ ಕಿರುಕುಳ ನೀಡಲಾರಂಭಿಸಿದ್ದಾರೆ. ಇದನ್ನು ಮಹಿಳೆ ವಿರೋಧಿಸಿದಾಗ, ಸಹ ಪ್ರಯಾಣಿಕರು ಮಗುವನ್ನು ಕ್ಯಾಬ್‌ನಿಂದ ಹೊರ ಎಸೆದು ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ.
ಆದ್ರೆ, ವೇಗವಾಗಿ ಹೋಗುತ್ತಿದ್ದ ಕ್ಯಾಬ್‌ನಿಂದ ಮಗುವನ್ನು ಎಸೆದ ಪರಿಣಾಮ, ಮಗು ಅಲ್ಲೇ ಸಾವನ್ನಪ್ಪಿದೆ. ಸ್ವಲ್ಪ ದೂರದ ಬಳಿಕ ತಾಯಿಯನ್ನೂ ಸಹ ಹೊರ ತಳ್ಳಲಾಗಿದ್ದು, ಆಕೆಗೂ ಗಂಭೀರ ಗಾಯಗಳಾಗಿವೆ ಎನ್ನಲಾಗಿದೆ.
ಇದೀಗ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಂಡವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇನ್ನೂ ಪತ್ತೆಯಾಗದ ಆರೋಪಿಗಳಿಗಾಗಿ ಪೊಲೀಸರು ಹುಡುಕುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.