ಮೂಡುಬಿದಿರೆ: ಬುಧವಾರ ಇಲ್ಲಿನ ಖಾಸಗಿ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು ಈ ಪ್ರಕರಣಕ್ಕೆ ಸಂಬಂಧಿಸಿ , ವೃದ್ದನೋರ್ವನನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಯನ್ನು ಕೋಟೆಬಾಗಿಲಿನ ಶ್ರೀಧರ್ ಪುರಾಣಿಕ್ ಎಂದು ಪೊಲೀಸರು ತಿಳಿಸಿದ್ದಾರೆ.ಮೂಲತಃ ಬೈಲೂರಿನವಳಾದ ಬಾಲಕಿ ಹೌದಾಲ್ ನಲ್ಲಿರುವ ತನ್ನ ಚಿಕ್ಕಮ್ಮ ಮನೆಯಲ್ಲಿ್ ವಾಸವಾಗಿದ್ದು, ಪ.ಪೂ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದಳು. ಕಾಲೇಜಿಗೆ ಹೋಗಿ ಬರುತ್ತಿದ್ದ ಬಾಲಕಿಗೆ ಮಂಗಳವಾರ ಕಿವಿ ನೋವು ಕಾಣಿಸಿಕೊಂಡು ಶಿಕ್ಷಕರಿಗೆ ಮಾಹಿತಿ ನೀಡಿದ್ದಾಳೆ. ಕಾಲೇಜಿನವರು ಮನೆಯವರಿಗೆ ವಿಷಯ ತಿಳಿಸಿದಾಗ, ಕೆಲಸದ ಒತ್ತಡದಲ್ಲಿದ್ದ ಅವರು ಪರಿಚಯಸ್ಥ ಶ್ರೀಧರ್ ಪುರಾಣಿಕ್ ಜತೆ ಮನೆಗೆ ಕಳುಹಿಸಿಕೊಡುವಂತೆ ಹೇಳಿದ್ದರೆನ್ನಲಾಗಿದೆ. ಸಂತ್ರಸ್ತೆಯ ಪೋಷಕರು ಪುರಾಣಿಕ್ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು.ಕಾರಿನಲ್ಲಿ ಬರುವಾಗ ಶ್ರೀಧರ್ ಪುರಾಣಿಕ್ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದು, ಮನೆ ಹತ್ತಿರ ಬಂದರೂ ಆಕೆಯನ್ನು ಕಾರಿನಿಂದ ಇಳಿಯಲು ಬಿಡಲಿಲ್ಲ ಎಂದು ದೂರಲಾಗಿದೆ. ಇದರಿಂದ ಮನನೊಂದ ಆಕೆ ಬುಧವಾರ ಮನೆಯ ಸಮೀಪದ ಹಾಡಿಯ ಮರವೊಂದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆನ್ನಲಾಗಿದೆ.ಈ ಹಿನ್ನಲೆಯಲ್ಲಿ ಆರೋಪಿಯನ್ನು ಬಂಧಿಸಿ,ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನಕ್ಕೆ ವಿಧಿಸಲಾಗಿದೆ. ಈತನ ವಿರುದ್ದ ಪೊಕ್ಸೋ ಕಾಯಿದೆ , ದಲಿತ ದೌರ್ಜನ್ಯ ತಡೆ ಕಾಯ್ದೆ, ಮತ್ತು ದಂಡ ಸಂಹಿತೆಯ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.