ಮಂಗಳೂರು: ಕುಡುಕನೋರ್ವನಿಗೆ ಅದೃಷ್ಟವೆಂಬಂತೆ ರಸ್ತೆ ಬದಿಯಲ್ಲಿ ಹತ್ತು ಲಕ್ಷ ರೂಪಾಯಿ ಸಿಕ್ಕಿದ್ದು ಆದರೆ ಈತನ ತಲೆಗೇರಿದ ಅಮಲಿನ ಪರಿಣಾಮ ಅಷ್ಟೂ ದುಡ್ಡು ಅರ್ಧ ಗಂಟೆಯಲ್ಲಿ ಪೊಲೀಸರ ಪಾಲಾದ ಘಟನೆ ಪಂಪ್ವೆಲ್ ನಲ್ಲಿ ನಡೆದಿದೆ.
ಹಣ ಸಿಕ್ಕಿದ್ದೇ ತಡ ಮದ್ಯ ವ್ಯಸನಿಯಾಗಿದ್ದ ಶಿವರಾಜ್ ಹಣದ ಬ್ಯಾಗ್ನಲ್ಲಿದ್ದ 1 ಸಾವಿರ ರೂ ತೆಗೆದು ಮದ್ಯ ಸೇವಿಸಿದ್ದಾರೆ. ನಂತರ ತನ್ನ ಜೊತೆಗಿದ್ದವರಿಗೂ ನೋಟಿನ ಕಂತೆ ನೀಡಿದ್ದಾರೆ. ಈ ವಿಷಯ ಕಂಕನಾಡಿ ಪೊಲೀಸರಿಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಹಣದ ಬ್ಯಾಗ್ ಸಮೇತ ಶಿವರಾಜ್ನನ್ನ ವಶಕ್ಕೆ ಪಡೆದಿದ್ದಾರೆ.
ಘಟನೆಯ ವಿವರ:
ಮೂಲತ : ತಮಿಳುನಾಡಿನವನಾಗಿರುವ ಕನ್ಯಾಕುಮಾರಿ ಶಿವರಾಜ್ (49) ಮಂಗಳೂರಿನಲ್ಲಿ ಮೆಕ್ಯಾನಿಕ್ ಆಗಿದ್ದಾರೆ. ಬೋಂದೆಲ್‌ನ ಕೃಷ್ಣನಗರದಲ್ಲಿ ಆತನ ಮನೆಯಿದೆ. ಪತ್ನಿ ಅನಾರೋಗ್ಯದಿಂದ ಮೃತಪಟ್ಟಿದ್ದು, ಮಗಳು ಪಿಯುಸಿ ವ್ಯಾಸಂಗ ಮಾಡುತ್ತಿದ್ದಾಳೆ. ವಿಪರೀತ ಕುಡಿತದ ಚಟ ಬೆಳೆಸಿಕೊಂಡಿರುವ ಶಿವರಾಜ್ ಮನೆಗೆ ಹೋಗುತ್ತಿಲ್ಲ. ಹೋಟೆಲ್‌ನಲ್ಲಿ ಚಹಾ, ತಿಂಡಿ ಮುಗಿಸಿ ಬಸ್‌ನಲ್ಲೇ ರಾತ್ರಿ ಕಳೆಯುತ್ತ ಜೀವನ ನಡೆಸುತ್ತಿದ್ದಾರೆ.
ನ.27ರಂದು ಪಂಪ್ವೆಲ್ ಮೇಲ್ಸೇತುವೆ ಸಮೀಪದ ವೈನ್ ಶಾಫ್‌ಗೆ ಹೋದ ಶಿವರಾಜ್ ಮತ್ತು ಸ್ನೀಹಿತ ಮದ್ಯ ಸೇವಿಸಿ ಬೀಡಿ ಸೇದುತ್ತಾ ನಿಂತಿದ್ದರು. ಅಲ್ಲಿನ ಬೈಕ್ ಗಳ ಪಾರ್ಕಿಂಗ್ ಸ್ಥಳದಲ್ಲಿ ಒಂದು ಚೀಲ ಬಿದ್ದಿತ್ತು. ಚೀಲದ ಬಳಿ ಹೋಗಿ ತೆರೆದು ನೋಡಿದಾಗ ಅಚ್ಚುಕಟ್ಟಾಗಿ ಕಟ್ಟಿದ್ದ ಬಂಡಲ್ ಇತ್ತು. ಕವರ್ ಹರಿದಾಗ, 500 ರೂ. ನೋಟುಗಳಿರುವ ಬಂಡಲ್ ಕಂಡು ಇಬ್ಬರೂ ಹೌಹಾರಿದರು
ಚೀಲ ಎತ್ತಿಕೊಂಡು ಎರಡು ನೋಟು ಹೊರಗೆ ತೆಗೆದು, ಮತ್ತೆ ಅದೇ ವೈನ್ ಶಾಪ್ ಗೆ ಹೋಗಿ ಇಬ್ಬರೂ ಕುಡಿದು, ಹೊರಗೆ ಬಂದು ಉಳ್ಳಾಲ ಕಡೆಯ ಸರ್ವಿಸ್ ರಸ್ತೆಯಲ್ಲಿ ಅರ್ಧ ಕಿ.ಮೀ. ನಡೆದುಕೊಂಡು ಹೋದರು. ಜೊತೆಗಿದ್ದ ಸ್ನೇಹಿತ ‘ನನಗೇನೂ ಕೊಡುವುದಿಲ್ಲವೇ’ ? ಎಂದು ಕೇಳಿದಾಗ, 500 ಮತ್ತು 2000 ರೂ. ಮುಖಬೆಲೆಯ ಒಂದು ಬಂಡಲ್ ಆತನಿಗೆ ಕೊಡಲಾಯಿತು. ಆತ ಮತ್ತೆ ಅದೇ ವೈನ್‌ಶಾಪ್‌ಗೆ ಹೋಗಿ ಮತ್ತೆ ಕುಡಿದು ಹೊರಗೆ ಬರುವಷ್ಟರಲ್ಲಿ ಯಾರೋ ಕೊಟ್ಟ ಮಾಹಿತಿಯಂತೆ ಗಸ್ತು ನಿರತ ಪೊಲೀಸರು ಆತನನ್ನು ಕರೆದುಕೊಂಡು ಹೋದರು. ಪೊಲೀಸರು ದುಡ್ಡಿನ ಬಗ್ಗೆ ಕೇಳಿದಾಗ, ದಾರಿಯಲ್ಲಿ ಸಿಕ್ಕಿದ್ದು ಎಂದು ಉತ್ತರಿಸಿದ್ದು, ಒಂದು ಬಂಡಲ್ ಸ್ನೇಹಿತನಿಗೆ ಕೊಟ್ಟಿರುವ ಬಗ್ಗೆಯೂ ತಿಳಿಸಿದ.
ಪೊಲೀಸರು ಮರುದಿನ ಶಿವರಾಜ್ ನೊಂದಿಗೆ ಬಂದು ಆ ಕೂಲಿ ಕಾರ್ಮಿನನ್ನು ಹುಡುಕಾಡಿದರೂ ಸಿಗಲಿಲ್ಲ. ಆ ಹಣ ಈಗ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿದೆ. ಈ ಬಗ್ಗೆ ಕೇಸ್ ದಾಖಲಾಗಿಲ್ಲ. ಒಂದು ಬಂಡಲ್ ಕೊಂಡು ಹೋದ ವ್ಯಕ್ತಿಯನ್ನು ಕರೆದುಕೊಂಡು ಬಂದರೆ, ಹಣ ಕೊಡುತ್ತೇವೆ ಎಂದು ಪೊಲೀಸರು ಒತ್ತಡ ಹಾಕುತ್ತಿದ್ದಾರೆ.
ಮೂರು ದಿನಗಳ ಕಾಲ ಠಾಣೆಯಲ್ಲಿ ಇಟ್ಟುಕೊಂಡು ಪೊಲೀಸರು ಬಿಟ್ಟು ಕಳಿಸಿದ್ದಾರೆ. ಶಿವರಾಜ್ ಬಾಕ್ಸ್ನಲ್ಲಿ 5ರಿಂದ 10 ಲಕ್ಷ ಇತ್ತು ಎಂದು ಹೇಳಿಕೆ ನೀಡಿದ್ದಾರೆ. ಆದರೆ ಬಾಕ್ಸ್ನಲ್ಲಿ 49 ಸಾವಿರ ರೂ ಮಾತ್ರ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ .
ವಿಪರ್ಯಾಸವೆಂದರೆ ವಾರ ಕಳೆದರೂ ಹಣದ ವಾರಸುದಾರರು ಮಾತ್ರ ಪತ್ತೆಯಾಗಿಲ್ಲ. ಈ ಬಗ್ಗೆ ಪೊಲೀಸರು ಯಾವುದೇ ದೂರು ದಾಖಲಿಸಿಕೊಂಡಿಲ್ಲ. ಪೊಲೀಸರ ನಡೆ ಹಲವು ಅನುಮಾನಕ್ಕೆ ಕಾರಣವಾಗಿದೆ. ಜೊತೆಗೆ ಚುನಾವಣೆ ಹೊಸ್ತಿನಲ್ಲಿ ಈ ರೀತಿ ಹಣದ ಕಂತೆ ಕಂತೆ ಬಾಕ್ಸ್ ಸಿಕ್ಕಿರುವುದು ಮಾತ್ರ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ .