

ಉಡುಪಿ: ನನ್ನನ್ನು ಉಚ್ಚಾಟಿಸಿರಬಹುದು. ಕಾರ್ಯಕರ್ತನಾಗಿಯೇ ಇರುತ್ತೇನೆ. ಪಕ್ಷದಿಂದ ಉಚ್ಚಾಟಿಸಿದವರಿಗೆ ಜಗದೀಶ್ ಶೆಟ್ಟರ್ ಮಾದರಿ ಕಣ್ಣ ಮುಂದೆಯೇ ಇದೆ. ಚುನಾವಣೆಯಲ್ಲಿ ಗೆದ್ದು ಪಕ್ಷಕ್ಕೆ ಹೋಗುವೆ ಅಥವಾ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿಯೇ ಇರುವೆ ಎಂದು ನೈಋತ್ಯ ಪದವೀಧರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ. ರಘುಪತಿ ಭಟ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಉಚ್ಚಾಟಿಸಿದ ಸುದ್ದಿ ಮಾಧ್ಯಮಗಳ ಮೂಲಕ ತಿಳಿಯಿತು. ಪಕ್ಷದ ನೋಟಿಸ್ ಕೂಡ ತಲುಪಿರಲಿಲ್ಲ. ಈಗ ಪ್ರಾಥಮಿಕ ಸದಸ್ಯತ್ವದಿಂದ ವಜಾ ಮಾಡಿರಬಹುದು. ಆದರೆ, ಈವರೆಗೂ ಪಕ್ಷದ ಯಾವ ನಾಯಕರಿಗೂ ನಾನು ಬೈದಿಲ್ಲ. ವ್ಯವಸ್ಥೆ ಸರಿಯಾಗಬೇಕು ಎಂದಷ್ಟೆ ಹೇಳಿದ್ದೇನೆ. ಆದರೆ, ಈ ಹಿಂದೆ ಪಕ್ಷಕ್ಕೆ ಮುಜುಗರ ಆಗುವಂತೆ ಬೈದಿದ್ದ ಜಗದೀಶ್ ಶೆಟ್ಟರ್ ಅವರು ಒಂದೇ ವರ್ಷದಲ್ಲಿ ಬಿಜೆಪಿ ಸೇರಿದರು ಮತ್ತು ಸಂಸದರಾಗಿ ಸ್ಪರ್ಧಿಸಲು ಟಿಕೆಟ್ ಕೂಡ ನೀಡಿದ್ದಾರೆ. ಹೀಗಾಗಿ ನಾನು ಬಿಜೆಪಿಗೆ ಹೋಗುತ್ತೇನೆ. ಉಚ್ಚಾಟಿಸಿರುವುದು ನೋವು ತಂದಿದೆ ಎಂದರು. ರಾಜ್ಯಸಭೆ ಚುನಾವಣೆ ಅಡ್ಡಮತದಾನ ಮಾಡಿದ ಇಬ್ಬರು ಶಾಸಕರ ವಿರುದ್ಧ ಈವರೆಗೂ ಯಾವುದೇ ಕ್ರಮ ಆಗಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ವಿರುದ್ಧ ಪಕ್ಷದೊಳಗೆ ಇದ್ದು ಕೆಲಸ ಮಾಡಿದವರ ಮೇಲೂ ಕ್ರಮ ಆಗಿಲ್ಲ. ಪಕ್ಷದ ಅಭ್ಯರ್ಥಿಯನ್ನು ಸೋಲಿಸಲು ಆರ್ಥಿಕ ನೆರವು ನೀಡಿದವರ ಮೇಲೂ ಶಿಸ್ತು ಕ್ರಮ ತೆಗೆದುಕೊಂಡಿಲ್ಲ ಎಂದು ಭಟ್ ಹೇಳಿದರು.