ನವದೆಹಲಿ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ಭೂವಿವಾದ, ಆಧಾರ್ ಸಿಂಧುತ್ವ, ತ್ರಿವಳಿ ತಲಾಕ್ ನಿಷೇಧ , ನೋಟು ಆಮಾನ್ಯೀಕರಣ ಸಂಬಂಧಿತ ಪ್ರಕರಣಗಳ ವಿಚಾರಣೆ ನಡೆಸಿ, ಐತಿಹಾಸಿಕ ತೀರ್ಪು ನೀಡಿದ್ದ ಕರ್ನಾಟಕದ ಮೂಡುಬಿದಿರೆ ಮೂಲದ ನ್ಯಾ. ಎಸ್. ಅಬ್ದುಲ್ ನಜೀರ್ ಅವರು ಬುಧವಾರ ನಿವೃತ್ತರಾಗಿದ್ದಾರೆ.
ಅಯೋಧ್ಯೆ ಪ್ರಕರಣದಲ್ಲಿ ತೀರ್ಪು ನೀಡಿದ ಪಂಚ ಸದಸ್ಯ ನ್ಯಾಯಪೀಠದಲ್ಲಿದ್ದ ಏಕೈಕ ಮುಸ್ಲಿಂ ನ್ಯಾಯಮೂರ್ತಿಯಾಗಿ ವಿಶೇಷ ಗಮನ ಸೆಳೆದಿದ್ದರು. 1956ರ ಜ. 5 ರಂದು ಮೂಡುಬಿದಿರೆಯಲ್ಲಿ ಜನಿಸಿದ ನ್ಯಾ. ನಜೀರ್ ಅವರು ಪ್ರಾಥಮಿಕ ಶಾಲಾ ಶಿಕ್ಷಣವನ್ನು ಇಲ್ಲಿಯೇ ಪೂರ್ಣಗೊಳಿಸಿದರು. ಮೂಡುಬಿದಿರೆಯ ಮಹಾವೀರ ಕಾಲೇಜಿನಲ್ಲಿ ಬಿ.ಕಾಂ ಪದವಿ ಗಳಿಸಿ, ಮಂಗಳೂರಿನ ಎಸ್‌ಡಿಎಂ ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು.
ಬೆಂಗಳೂರಿನ ಹೈಕೋರ್ಟ್‌ನಲ್ಲಿ 1983ರಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದರು. 2003ರಿಂದ ಅವರು ಕರ್ನಾಟಕ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ್ದರು. 2004ರ ಸೆಪ್ಟೆಂಬರ್ 24ರಂದು ಅವರು ಕಾಯಂ ನ್ಯಾಯಮೂರ್ತಿಯಾಗಿ ನೇಮಕಗೊಂಡರು. 2017ರ ಫೆಬ್ರವರಿ 17ರಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದರು.
ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಐದು ವರ್ಷ ಕಾರ್ಯನಿರ್ವಹಿಸಿದ್ದ ನ್ಯಾ. ನಜೀರ್ ಅವರು ಅನೇಕ ಮಹತ್ವದ ತೀರ್ಪುಗಳನ್ನು ನೀಡಿದ್ದಾರೆ. ನಿವೃತ್ತಿ ದಿನದಂದು ಅವರು ಸಿಜೆಐ ಅವರೊಂದಿಗೆ ಔಪಚಾರಿಕ ಪೀಠದಲ್ಲಿ ಕುಳಿತು ನ್ಯಾಯಾಲಯದ ಕಲಾಪಗಳಲ್ಲಿ ಭಾಗಿಯಾದರು.