ಹುಬ್ಬಳ್ಳಿ : ಗೋವಾದಲ್ಲಿ ಗೋಹತ್ಯೆ ಜಾರಿ ಮಾಡಿದರೆ ಅಲ್ಲಿರುವ ಕ್ರೈಸ್ತರೇ ಹೊಡೆಯುತ್ತಾರೆ, ಗೋವಾದಿಂದ ಬರುವ ಗೋಮಾಂಸವನ್ನು ಯಾಕೆ ಸರ್ಕಾರ ತಡೆಯುತ್ತಿಲ್ಲ ಎಂದು ರಾಜ್ಯ ಜೆಡಿಎಸ್ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ವಾಗ್ಧಾಳಿ ನಡೆಸಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಇಬ್ರಾಹಿಂ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ರಾಜ್ಯದಲ್ಲಿ ಮಾಡಿದ ಹಾಗೆ ಗೋವಾದಲ್ಲಿ ಗೋಹತ್ಯೆ ಜಾರಿ ಮಾಡಿದರೆ ಅಲ್ಲಿರುವ ಕ್ರೈಸ್ತರು ಹೊಡೆಯುತ್ತಾರೆ, ಗೋವಾದಿಂದ ದನದ ಮಾಂಸ ರಾಜ್ಯಕ್ಕೆ ಬರುತ್ತಿದೆ, ಆದರೆ ಇದನ್ನು ಯಾಕೆ ತಡೆಯಲು ಮುಂದಾಗಿಲ್ಲ ಎಂದು ವಾಗ್ಧಾಳಿ ನಡೆಸಿದರು.
ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಮೊದಲು ಮತದಾರರಿಗೆ ಹಣ, ವಸ್ತುಗಳನ್ನು ಹಂಚುವ ವಿಚಾರವನ್ನು ಜೆಡಿಎಸ್ ಗಂಭೀರವಾಗಿ ಪರಿಗಣಿಸಿದೆ. ನಮ್ಮ ಯುವಕರು ಇದಕ್ಕಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಹೆಚ್.ಡಿ.ಕುಮಾರಸ್ವಾಮಿಯೇ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ರಾಜ್ಯ ಜೆಡಿಎಸ್ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.ಜೆಡಿಎಸ್ ಪಕ್ಷವು ಅಧಿಕಾರಕ್ಕೆ ಬಂದರೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲಿದ್ದು, ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಸೃಷ್ಟಿಸಿದರೆ ಮುಸ್ಲಿಂ, ದಲಿತ, ಮಹಿಳೆ, ಒಬಿಸಿ, ಲಿಂಗಾಯತ ಅಥವಾ ಇತರ ಸಮುದಾಯದ ನಾಯಕರಿಗೆ ಅವಕಾಶ ನೀಡಲಾಗುವುದು ಎಂದು ಅವರು ಹೇಳಿದರು.
ಕುಮಾರಸ್ವಾಮಿ ಅವರು ಮುಸ್ಲಿಂ ಅಥವಾ ದಲಿತ ಸಿಎಂ ಆಗಬೇಕು ಎಂಬ ಆಸೆ ವ್ಯಕ್ತಪಡಿಸಿದ್ದಾರೆ, ಅದರಲ್ಲಿ ತಪ್ಪೇನಿದೆ? ಇಲ್ಲಿ ಪಕ್ಷದ ಅಧ್ಯಕ್ಷನಾಗಿ, ಕುಮಾರಸ್ವಾಮಿ ಅವರೇ ಸಿಎಂ ಆಗುತ್ತಾರೆ ಎಂದು ನಾನು ಹೇಳುತ್ತೇನೆ. ಆದರೆ, 2024 ರ ಲೋಕಸಭಾ ಚುನಾವಣೆಯಲ್ಲಿ ಅವರು ರಾಷ್ಟ್ರ ರಾಜಕಾರಣವನ್ನು ಪ್ರವೇಶಿಸುವ ಸಾಧ್ಯತೆಯಿದೆ ಆಗ ಇತರರು ಇಲ್ಲಿ ಮುಖ್ಯಮಂತ್ರಿಯಾಗುತ್ತಾರೆ ಎಂದು ಇಬ್ರಾಹಿಂ ಹೇಳಿದರು.