ಹಿಂದೂ ಕಾರ್ಯಕರ್ತರು ಅಣಬೆಗಳಿದ್ದಂತೆ, ಹೆಚ್ಚು ಬಾಳಿಕೆ ಇಲ್ಲ..! ವಿವಾದಾತ್ಮಕ ಹೇಳಿಕೆ ನೀಡಿದ ಪುತ್ತೂರು ಶಾಸಕ ಸಂಜೀವ ಮಠಂದೂರು-ಕಾರ್ಯಕರ್ತರು ಗರಂ

ನಾಡಿನ ಹಿಂದೂ ಕಾರ್ಯಕರ್ತರನ್ನು ಅಣಬೆಗೆ ಹೋಲಿಸುವ ಮೂಲಕ ಪುತ್ತೂರು ಶಾಸಕ ಸಂಜೀವ ಮಠಂದೂರು ಚುನಾವಣೆ ಹೊತ್ತಿನಲ್ಲಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಇನ್ನು ಶಾಸಕರ ವಿರುದ್ದ ಹಿಂದೂ ಸಂಘಟನೆಗಳು ಕಿಡಿಕಿಡಿಕಾರಿವೆ.

ಶಾಸಕ ಸಂಜೀವ ಮಠಂದೂರು ಪುತ್ತೂರಿನಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಹಿಂದೂಗಳನ್ನು ‘ಅಣಬೆ’ ಗೆ ಹೋಲಿಸಿ ಮಾತನಾಡಿದ್ದಾರೆ. ಈಗ ‘ಅಣಬೆ’ ಹೇಳಿಕೆ ವಿರುದ್ದ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಪುತ್ತೂರಿಗೆ ಅಮಿತ್ ಶಾ ಭೇಟಿಗೆ ಶುಭಕೋರಿ ನಗರದಲ್ಲಿ ಹಿಂದೂ ಮುಖಂಡ ಅರುಣ್ ಪುತ್ತಿಲ ಬೆಂಬಲಿಗರು ಕಟೌಟ್, ಬ್ಯಾನರ್ ಅಳವಡಿಸಿದ್ದರು. ಪುತ್ತೂರು ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯೂ ಆಗಿರುವ ಅರುಣ್ ಪುತ್ತಿಲ ಅವರ ಕಟೌಟ್‌ ಮತ್ತು ಬ್ಯಾನರ್‌ನಲ್ಲಿ ಬಿಜೆಪಿ ನಾಯಕರ ಭಾವಚಿತ್ರಗಳಿದ್ದರೂ ಶಾಸಕ ಮಠಂದೂರು ಭಾವಚಿತ್ರ ಹಾಕಿರಲಿಲ್ಲ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಬ್ಯಾನರ್ ಹಾಕಿದವರನ್ನು ಪರೋಕ್ಷವಾಗಿ ಅಣಬೆಗೆ ಹೋಲಿಸಿದ್ದಾರೆ. ‘ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವಕಾಶ ಇದೆ. ಚುನಾವಣೆ ಸಂದರ್ಭದಲ್ಲಿ ಇನ್ನೂ ಹೆಚ್ಚು ಅಲಂಕಾರಕ್ಕೆ ಮೆರಗು ಬರುತ್ತದೆ. ಹೊಸ ಹೊಸ ವ್ಯಕ್ತಿಗಳು ಹುಟ್ಟಿಕೊಳ್ಳುತ್ತಾರೆ. ಮಳೆ ಬಂದಾಗ ಅಣಬೆ ಹುಟ್ಟುತ್ತದೆ. ಆದರೆ, ಅದು ಭಾರೀ ಸಮಯ ಬಾಳಿಕೆ ಬರುವುದಿಲ್ಲ. ಪುನಃ ಮಳೆ ಹೋದಾಗ ಅಣಬೆಯು ಹೋಗುತ್ತದೆ’ ಎಂದು ಹೇಳಿಕೆ ನೀಡಿ ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದ್ದಾರೆ.

ಶಾಸಕರು ಅರುಣ್ ಪುತ್ತಿಲ ಅವರನ್ನೇ ಅಣಬೆಗೆ ಹೋಲಿಸಿದ್ದು ಎಂದು ಕಾರ್ಯಕರ್ತರು ಗರಂ ಆಗಿದ್ದಾರೆ. ಸಾಮಾಜಿಕ ತಾಣಗಳಲ್ಲಿ ಶಾಸಕ ಮಠಂದೂರು ವಿರುದ್ದ ಕಾರ್ಯಕರ್ತರು ಮುಗಿಬಿದ್ದು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. 2018ರ ಚುನಾವಣೆಯಲ್ಲಿ ಹಿಂದೂ ಮುಖಂಡ ಅರುಣ್ ಪುತ್ತಿಲ ಜೊತೆ ಕಾಣಿಸಿಕೊಂಡಿದ್ದ ಶಾಸಕ ಮಠಂದೂರು, ಅವರ ಪರವಾಗಿ ಪುತ್ತಿಲ ಅವರು ಚುನಾವಣಾ ಪ್ರಚಾರ ಕೈಗೊಂಡು ಗೆಲುವಿಗೆ ಭಾರಿ ಬೆಂಬಲ ನೀಡಿದ್ದರು. ಆದರೆ, ಈಗ ಅವರನ್ನೇ ತುಳಿಯಲು ಯತ್ನಿಸಲಾಗುತ್ತಿದೆ. ಕೂಡಲೇ ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು ಅವರನ್ನು ಬದಲಾಯಿಸುವಂತೆ ಆಗ್ರಹಿಸಿ ಕ್ಷೇತ್ರದ ಕಾರ್ಯಕರ್ತರು ಹೈಕಮಾಂಡ್‌ ಮೇಲೆ ಒತ್ತಡ ಹಾಕಲು ಮುಂದಾಗಿದ್ದಾರೆ.

Check Also

ನಾಳೆ (ಜು.20) ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಶಾಲಾ- ಕಾಲೇಜುಗಳಿಗೆ ರಜೆ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ & ಪ್ರೌಢಶಾಲೆ, ಪದವಿ …

Leave a Reply

Your email address will not be published. Required fields are marked *

You cannot copy content of this page.