ಲಿಂಗ ಪರಿವರ್ತಿಸಿಕೊಂಡು ಹೆಣ್ಣಾದ ಮುಸ್ಲಿಂ ಯುವಕ: ದೇರಳಕಟ್ಟೆ ಹೆಸರು ದುರ್ಬಳಕೆಗೆ ಆಕ್ರೋಶ

ಮಂಗಳೂರು: ಮುಸ್ಲಿಂ ಸಮುದಾಯಕ್ಕೆ ಸೇರಿದ ಯುವಕನೊಬ್ಬ ಲಿಂಗ ಪರಿವರ್ತನೆ (Gender change) ಮಾಡಿಸಿಕೊಂಡು ಹೆಣ್ಣಾಗಿದ್ದಾನೆ. ಈ ನಡುವೆ ಆತ ತಾನು ಈ ರೀತಿ ಲಿಂಗ ಪರಿವರ್ತನೆ ಮಾಡಿಕೊಳ್ಳಲು ದೇರಳಕಟ್ಟೆಯ ಗೆಳೆಯನೊಬ್ಬ ಕಾರಣ ಎಂದು ಹೇಳಿದ್ದು, ಆ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಈ ವಿಚಾರವನ್ನು ಆತ ವಿಡಿಯೊ ಕ್ಲಿಪ್‌ ಒಂದರಲ್ಲಿ ಹೇಳಿಕೊಂಡಿದ್ದಾನೆ.

ಯೂಟ್ಯೂಬ್‌ ಕ್ಲಿಪ್‌ನಲ್ಲಿ ಏನಿದೆ?
ತುಮಕೂರಿನ ನಿಝಾಂ ಎಂಬ ಯುವಕ ಮನೆಗೆ ಬಾರದೇ ಹಲವು ತಿಂಗಳುಗಳು ಕಳೆದಿದೆ. ಇದರಿಂದ ತಾಯಿ ಸಂಬಂಧಿಕರ ಮೂಲಕ ಯುವಕನ ಮೊಬೈಲ್‌ಗೆ ಕರೆ ಮಾಡಿದಾಗ, ತಾನು ಹುಡುಗಿಯಾಗಲು ಬಯಸಿದವನು. ಇದೀಗ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ತೃತೀಯ ಲಿಂಗಿಗಳ ಜತೆಗೆ ನೆಲೆಸಿದ್ದೇನೆ. ಈ ರೂಪದಲ್ಲಿ ಮರಳಿ ಊರಿಗೆ ಬಂದಲ್ಲಿ ತಾಯಿ ಹಾಗೂ ಸಂಬಂಧಿಕರಿಗೆ ನೋವಾಗುವುದು. ಅದಕ್ಕಾಗಿ ಬರಲು ಬೇಸರವಾಗುತ್ತಿದೆ ಎಂದಿದ್ದಾನೆ.

ಇದೇ ವೇಳೆ ಯುವಕನ ಸಂಬಂಧಿಕರು ಇಂತಹ ಶಸ್ತ್ರಚಿಕಿತ್ಸೆ ನಡೆಸಲು ಕಾರಣ ಯಾರು? ಎಂಬುದನ್ನು ಪ್ರಶ್ನಿಸಿದಾಗ, ತನ್ನ ಗೆಳೆಯ ದೇರಳಕಟ್ಟೆಯವ. ತನ್ನನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸುವಂತೆ ಮಾಡಿದ್ದಾನೆ ಎಂದು ನಿಝಾಂ ಹೇಳಿದ್ದಾನೆ. ಸದ್ಯ ತುಮಕೂರು ಶಿರಾ ದರ್ಗಾ ಸಮೀಪದ ಫ್ಲ್ಯಾಟ್‌ನಲ್ಲಿ ನೆಲೆಸಿದ್ದೇವೆ. ತಾಯಿಯನ್ನು ಕಾಣುವ ಮನಸ್ಸಾದರೂ ಬರಲು ನೋವಾಗುತ್ತದೆ. ತಾಯಿ ಹಲವು ದಿನಗಳಿಂದ ಊಟ ಮಾಡಿಲ್ಲ ಎಂದಾಗ, ತಾನು ಕೂಡ ಬೇಸರದಿಂದ ಇರುವುದಾಗಿ ತಿಳಿಸುವ ಸಂಭಾಷಣೆ ವೈರಲ್‌ ಆಗಿದೆ.

ದೇರಳಕಟ್ಟೆ ಜಮಾಅತಿನವರ ಆಕ್ಷೇಪ
ಈ ನಡುವೆ, ಯುವಕನ ಶಸ್ತ್ರಚಿಕಿತ್ಸೆ ನಡೆಸಲು ದೇರಳಕಟ್ಟೆಯ ಯುವಕ ಕಾರಣ ಎನ್ನುವ ವಾಯ್ಸ್ ಕ್ಲಿಪ್ ಯೂಟ್ಯೂಬ್‌ನಲ್ಲಿ ಹಾಕಲಾಗಿದೆ. ಇದರ ವಿರುದ್ಧ ದೇರಳಕಟ್ಟೆಯ ಜಮಾಅತಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ರೀತಿಯ ಯಾವುದೇ ವ್ಯಕ್ತಿಯೂ ದೇರಳಕಟ್ಟೆ ಜಮಾಅತಿನಲ್ಲಿಲ್ಲ. ಯೂಟ್ಯೂಬ್‌ನಲ್ಲಿ ದೇರಳಕಟ್ಟೆಯ ಹೆಸರು ಹಾಕಿರುವುದು ಅಕ್ಷಮ್ಯ ಎನ್ನುವ ಬರಹವನ್ನು ಸಾಮಾಜಿಕ ಮುಂದಾಳು ಡಿ.ಐ ಅಬೂಬಕರ್ ಕೈರಂಗಳ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಂಡಿದ್ದಾರೆ.

ಘಟನೆಗೂ ದೇರಳಕಟ್ಟೆಗೂ ಸಂಬಂಧವಿಲ್ಲ
ಈ ಸಂಬಂಧ ಸಾಮಾಜಿಕ ಕಾರ್ಯಕರ್ತ ಡಿ.ಐ ಅಬೂಬಕರ್ ಕೈರಂಗಳ ಆಕ್ರೋಶ ಹೊರಹಾಕಿದ್ದಾರೆ.
ದೇರಳಕಟ್ಟೆ ಜಮಾಅತಿನವರು ಘಟನೆಗೂ ದೇರಳಕಟ್ಟೆಗೂ ಯಾವುದೇ ಸಂಬಂಧವಿರುವುದಿಲ್ಲ. ಲಿಂಗ ಪರಿವರ್ತನೆ ಮಾಡಿಸಿಕೊಂಡ ಹುಡುಗನಾಗಲಿ, ಪುಸಲಾಯಿಸಿ ಕರೆದುಕೊಂಡ ಹೋದ ಯುವಕನಾಗಲಿ ಇಬ್ಬರೂ ದೇರಳಕಟ್ಟೆಯವರೇ ಅಲ್ಲ. ಲಿಂಗ ಬದಲಾವಣೆ ಆಗಿರುವುದು ಬೆಂಗಳೂರಿನಲ್ಲಿ. ಇದರ ಹಿಂದಿನ ಜಾಲ ಕೂಡ ಇರುವುದು ಬೆಂಗಳೂರಿನಲ್ಲಿ ಎಂದಿದ್ದಾರೆ.

ಅವಿವೇಕಿಯೋರ್ವ ದೇರಳಕಟ್ಟೆ ಹೆಸರು ಪ್ರಸ್ತಾಪಿಸಿ ಯೂಟ್ಯೂಬ್‌ನಲ್ಲಿ ಹಾಕಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಹುಡುಗನನ್ನು ಪುಸಲಾಯಿಸಿದವ ಬೇರೆ ಊರಿನಿಂದ ಬಂದು ದೇರಳಕಟ್ಟೆಯ ಆಸುಪಸಿನಲ್ಲಿ ವಾಸಿಸುತ್ತಿರುವ ಒಂದು ಕುಟುಂಬಕ್ಕೆ ಸೇರಿದವನು. ಸಹಜವಾಗಿ ಅವನು ದೇರಳ ಕಟ್ಟೆ ಪೇಟೆಗೆ ಬಂದು ಹೋಗುತ್ತಿದ್ದುದು ನಿಜವಾಗಿತ್ತು. ಅಷ್ಟೇ ಹೊರತು ದೇರಳ ಕಟ್ಟೆ ಜಮಾಅತ್‌ಗೆ ಒಳಪಟ್ಟವನೋ ಧಾರ್ಮಿಕ, ಸಾಮಾಜಿಕ ಸಂಘ ಸಂಸ್ಥೆಯಲ್ಲಿರುವವನೋ ಅಲ್ಲ. ಯಾವ ವಿಧದಲ್ಲೂ ದೇರಳಕಟ್ಟೆಗೆ ಸಂಬಂಧವೇ ಇಲ್ಲದ ಆ ಯುವಕನನ್ನು ದೇರಳಕಟ್ಟೆಯವನು ಹಾಗೂ ದೇರಳಕಟ್ಟೆಯಲ್ಲಿ ನಡೆದ ಘಟನೆ ಎಂದು ಸುದ್ದಿ ಬಿತ್ತರಿಸುವುದು ಅಕ್ಷಮ್ಯವಾಗಿದೆ ಎಂದು ಪೋಸ್ಟ್‌ ಮಾಡಿದ್ದಾರೆ.

ಧಾರ್ಮಿಕ, ಸಾಮಾಜಿಕ ರಂಗಗಳಲ್ಲಿ ಸೇವೆ ಸಲ್ಲಿಸುತ್ತಾ ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದೆ ಸುಸಂಸ್ಕೃತ ಯುವಕರಾಗಿದ್ದಾರೆ ದೇರಳಕಟ್ಟೆಯವರು. ಇಂತಹ ನಾಡಿಗೆ ವೃಥಾ ಕಳಂಕ ಹಚ್ಚುವವರ ವಿರುದ್ಧ ಕಾನೂನಿನ ಮೊರೆ ಹೋಗುವುದು ಅಗತ್ಯವೆನಿಸಿದೆ. ದೇರಳಕಟ್ಟೆಯ ಹೆಸರನ್ನು ವೃಥಾ ಎಳೆದು ಹಾಕಿದವರು ಕೂಡಲೇ ತಿದ್ದಿ ಕ್ಷಮಯಾಚನೆ ಮಾಡಿದರೆ ಅವರಿಗೆ ಒಳ್ಳೆಯದು ಎಂದು ಡಿ.ಐ ಅಬೂಬಕರ್ ಕೈರಂಗಳ ಸಾಮಾಜಿಕ ಜಾಲತಾಣಗಳ ಮೂಲಕ ಎಚ್ಚರಿಕೆ ಸಂದೇಶವನ್ನು ನೀಡಿದ್ದಾರೆ.

Check Also

ಮುತ್ತೂರು: ಕೊಳವೂರು ಶಕ್ತಿ ಕೇಂದ್ರದ ಭಾರತೀಯ ಜನತಾ ಪಾರ್ಟಿಯ ನೂತನ ಪದಾಧಿಕಾರಿಗಳ ಆಯ್ಕೆ

ಮಂಗಳೂರು: ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳವೂರು ಶಕ್ತಿ ಕೇಂದ್ರದ ಭಾರತೀಯ ಜನತಾ ಪಾರ್ಟಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ …

Leave a Reply

Your email address will not be published. Required fields are marked *

You cannot copy content of this page.