ಮಂಗಳೂರು: ನಗರದ ಹೊರವಲಯದ ತೊಕ್ಕೊಟ್ಟಿನ ಮಾಡೂರಿನಲ್ಲಿರುವ ಪಿಜಿಯಿಂದ ಕೆಲದಿನಗಳ ಹಿಂದೆ ಏಕಾಏಕಿ ನಾಪತ್ತೆಯಾದ ಪಿಎಚ್‌ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ವಿಸಿಟಿಂಗ್ ವೀಸಾದಲ್ಲಿ ಕತಾರ್‌ಗೆ ತೆರಳಿದ್ದಾಗಿ ಮಾಹಿತಿ ದೊರಕಿದೆ. ದೇರಳಕಟ್ಟೆಯ ಖಾಸಗಿ ವಿಶ್ವವಿದ್ಯಾಲಯಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದ ಚೈತ್ರಾ ಹೆಬ್ಬಾರ್ ಫೆಬ್ರವರಿ 17ರಂದು ಚೈತ್ರಾ ಹೆಬ್ಬಾರ್ ಪಿಜಿಯಿಂದ ತನ್ನ ದ್ವಿಚಕ್ರ ವಾಹನ ಸಮೇತ ನಾಪತ್ತೆಯಾಗಿದ್ದಳು. ಈ ಬಗ್ಗೆ ನಾಪತ್ತೆ ದೂರು ದಾಖಲಾದ ಬಳಿಕ ಚೈತ್ರಾ ಹೆಬ್ಬಾರ್ ಹಾಗೂ ಪ್ರಿಯಕರ ಶಾರೂಕ್ ಹಿಂದೆ ಬಿದ್ದ ಉಳ್ಳಾಲ ಪೊಲೀಸರು, ಹಿಮಾಚಲ ಪ್ರದೇಶದಲ್ಲಿ ಆಕೆಯ ಪ್ರಿಯಕರನನ್ನು ಪತ್ತೆಹಚ್ಚಿ ವಶಕ್ಕೆ ತೆಗೆದುಕೊಂಡಿದ್ದಾರೆ. ಇದೀಗ ಆತನನ್ನು ವಿಚಾರಣೆ ನಡೆಸಿ, ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಪುತ್ತೂರಿನ ಪುರುಷರಕಟ್ಟೆ ನಿವಾಸಿ ಚೈತ್ರಾ ಹೆಬ್ಬಾರ್ ತನ್ನ ಪ್ರಿಯಕರ ಬಂಟ್ವಾಳ ನೇರಳಕಟ್ಟೆ ನಿವಾಸಿ ಶಾರುಕ್ ಸಹಾಯದಿಂದ ಕತಾರ್ ಗೆ ತೆರಳಿದ್ದಾಳೆ ಎಂದು ತಿಳಿದು ಬಂದಿದೆ. ನಾಪತ್ತೆಗೂ ಮುನ್ನ ಆಕೆ ತನ್ನ ಬ್ಯಾಂಕ್ ಖಾತೆಯಿಂದ 40 ಸಾವಿರ ಹಣವನ್ನು ವಿತ್ ಡ್ರಾ ಮಾಡಿದ್ದಾಳೆ. ಬಳಿಕ ಆಕೆ ಹಿಮಾಚಲ ಪ್ರದೇಶಕ್ಕೆ ತೆರಳಿ ದೆಹಲಿ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ಕತಾರ್ ಗೆ ತೆರಳಿದ್ದಾಳೆ ಎಂದು ತಿಳಿದು ಬಂದಿದೆ.