ಸುಳ್ಯ : ವಿವಾಹಿತ ಮಹಿಳೆಯ ಜತೆ ವಿಟ್ಲದ ಬಿಜೆಪಿ ಮುಖಂಡ ತೆರಳುತ್ತಿದ್ದಾಗ ಮಹಿಳೆಯ ಪತಿ ಅವರಿಬ್ಬರನ್ನು ಚೇಸ್ ಮಾಡಿ ರೆಡ್ ಹ್ಯಾಂಡ್ ಆಗಿ ಹಿಡಿದ ಘಟನೆ ಸುಳ್ಯ ತಾಲೂಕಿನ ಜಾಲ್ಸೂರಿನಲ್ಲಿ ಜ. 31 ರಂದು ನಡೆದಿದೆ. ಈ ವೇಳೆ ಬಿಜೆಪಿ ಮುಖಂಡನಿಗೆ ಮಹಿಳೆಯ ಪತಿ ಧರ್ಮದೇಟು ನೀಡಿದ್ದು, ಈ ವೇಳೆ ಆತ ಮಹಿಳೆ ಹಾಗೂ ಕಾರನ್ನು ಬಿಟ್ಟು ಪಕ್ಕದ ಕಾಡಿನಲ್ಲಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಘಟನೆಯ ವಿಡಿಯೋ ಹಾಗೂ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮಹಿಳೆಯ ಪತಿ ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದ 38 ರ ಹರೆಯದ ವ್ಯಕ್ತಿ ಪುತ್ತೂರು ಡಿವೈಎಸ್ಪಿಯವರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ಅದರಲ್ಲಿ ಅವರು ತನ್ನ ಪತ್ನಿ (29 ವ) ಹಾಗೂ ಕೇಪು ಗ್ರಾಮದ ಮುಳಿಯಾಳ ಮುಗೇರು ನಿವಾಸಿ ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷರು ಹಾಗೂ ಪುಣಚ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಹರಿಪ್ರಸಾದ್ ಯಾದವ್ (44 ವ) ಮಧ್ಯೆ ಅನೈತಿಕ ಸಂಬಂಧವಿದೆ ಎಂದು ಆರೋಪಿಸಿದ್ದಾರೆ.
ದೂರುದಾರರು ಹಾಗೂ ಅವರ ಪತ್ನಿಯ ವಿವಾಹವಾಗಿ 9 ವರ್ಷವಾಗಿದ್ದು, ಅವರಿಬ್ಬರಿಗೆ 8 ವರ್ಷದ ಹೆಣ್ಣು ಮಗಳಿದ್ದಾಳೆ. ಪತ್ನಿಯೂ ಇತ್ತೀಚೆಗೆ ಕೆಲ ವರ್ಷಗಳಿಂದ ತನ್ನ ಜತೆ ಇರದೇ ಪ್ರತ್ಯೇಕವಾಗಿ ವಾಸಿಸುತ್ತಿದ್ದಾಳೆ. ಆದರೇ ನಾವು ವಿವಾಹ ವಿಚೇಧನ ಪಡೆದುಕೊಂಡಿರದೇ ನಮ್ಮಿಬ್ಬರ ವಿವಾಹ ಊರ್ಜಿತದಲ್ಲಿದೆಯೆಂದು ದೂರಿನಲ್ಲಿ ವಿವರಿಸಲಾಗಿದೆ.
ಜ 31 ರಂದು ಪತ್ನಿಯೂ ಸಮೀಪದ ಜಾತ್ರೆಗೆಂದು ಹೋದವಳನ್ನು ಹರಿ ಪ್ರಸಾದ್ ಅನೈತಿಕ ಸಂಬಂಧ ನಡೆಸುವ ದುರುದ್ದೇಶದಿಂದ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ . ಈ ಬಗ್ಗೆ ಮಾಹಿತಿ ದೊರೆತ ಹಿನ್ನಲೆಯಲ್ಲಿ ಆ ಕಾರನ್ನು ನನ್ನ ಮೋಟಾರ್ ಬೈಕ್ ಮೂಲಕ ಪುತ್ತೂರಿನಿಂದ ಹಿಂಬಾಲಿಸಿದ್ದೇನೆ . ಸುಳ್ಯ ತಾಲೂಕಿನ ಜಾಲ್ಸೂರು ಎಂಬಲ್ಲಿ ಕಾರನ್ನು ತಡೆಯಲು ಪ್ರಯತ್ನಿಸಿದಾಗ ಹರಿ ಪ್ರಸಾದ್ ಬೈಕ್ ಮೇಲೆ ವಾಹನ ಚಲಾಯಿಸಿ ಹತ್ಯೆಗೆ ಯತ್ನಿಸಿದ್ದಾನೆ . ತಕ್ಷಣ ತಪ್ಪಿಸಿಕೊಂಡ ನಾನು ಕಾರನ್ನು ತಡೆದಿದ್ದು, ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದ್ದಾರೆ. ಕೂಡಲೇ ಹರಿ ಪ್ರಸಾದ್ ಕಾರು ಹಾಗೂ ಪತ್ನಿಯನ್ನು ಬಿಟ್ಟು ಪರಾರಿಯಾಗಿರುತ್ತಾನೆಂದು ದೂರಿನಲ್ಲಿ ಆರೋಪಿಸಲಾಗಿದೆ.
ಘಟನೆಯ ವಿಡಿಯೋ ಹಾಗೂ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಷ್ಟ್ರೀಯ ಪಕ್ಷದ ಉನ್ನತ ಜವಬ್ದಾರಿ ಹೊಂದಿರುವ ಮುಖಂಡನೊಬ್ಬನ ವರ್ತನೆ ಸಾರ್ವಜನಿಕ ವಲಯ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಲ್ಲದೇ ಈತ ಪಕ್ಷದ ವಿವಿಧ ಮುಖಂಡರ ಜತೆ ಇರುವ ಫೋಟೊ ಹಾಗೂ ಪಕ್ಷದಲ್ಲಿ ತನಗೆ ವಹಿಸಲಾಗಿರುವ ಹುದ್ದೆಯ ಬಗ್ಗೆ ಫೇಸ್ ಬುಕ್ ನಲ್ಲಿ ಹಾಕಿಕೊಂಡಿರುವ ಬಯೋ ( Bio) ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇನ್ನು ದೂರುದಾರರ ಪತ್ನಿಯೂ ಜಾಲ್ಸೂರು ಎಂಬಲ್ಲಿ ಕಾರು ತಡೆದು ಪತಿ ತನ್ನ ಮೇಲೆ ಹಲ್ಲೆ ನಡೆಸಿರುವುದಾಗಿ ಸುಳ್ಯ ಠಾಣೆಗೆ ದೂರು ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೇ ಈ ಎರಡು ಘಟನೆಯ ಬಗ್ಗೆ ಸುಳ್ಯ ಠಾಣೆಯಲ್ಲಿ ವಿಚಾರಿಸಿದಾಗ ತಮಗೆ ಈ ಬಗ್ಗೆ ಮಾಹಿತಿಯಿಲ್ಲ ಎಂದು ತಿಳಿಸಿರುತ್ತಾರೆ. ಘಟನೆಯ ಬಗ್ಗೆ ಮಾಹಿತಿ ಪಡೆಯಲು ಹರಿ ಪ್ರಸಾದ್ ಯಾದವ್ ಅವರನ್ನು ಸಂಪರ್ಕಿಸಲು ಯತ್ನಿಸಲಾಯಿತಾದರೂ ಅವರು ಪ್ರತಿಕ್ರಿಯೆಗೆ ಲಭ್ಯರಾಗಿಲ್ಲ.