ಊಟಕ್ಕಿಲ್ಲದ ಉಪ್ಪಿನಕಾಯಿಯಂತಾದ ತೊರ್ಪು ಡ್ಯಾಮ್! ಸರಿಯಾದ ಸಮಯಕ್ಕೆ ಗೇಟ್ ಅಳವಡಿಸಿ, ತೆಗೆಯಲು ಗ್ರಾಮಸ್ಥರ ಆಗ್ರಹ

ಹೊಸಂಗಡಿ ಗ್ರಾಮ ಪಂಚಾಯತ್ ಗ್ರಾಮಸಭೆ
ಹೊಸಂಗಡಿ, ಜೂ. 1: ಕಳೆದ ಹಿಂಗಾರಿನ ಬಳಿಕ ಗೇಟ್ ಅಳವಡಿಸಲು ವಿಳಂಬ ಮಾಡಿದ್ದಲ್ಲದೆ ಸರಿಯಾದ ರೀತಿಯಲ್ಲಿ ಅಳವಡಿಸದೆ ನೀರು ಸೋರಿಕೆಯಾಗಿದ್ದರಿಂದ ಈ ಬೇಸಿಗೆಗೆ ತೊರ್ಪು ಫಲ್ಗುಣಿ ನದಿಯಲ್ಲಿ ನೀರು ಬಹುಬೇಗನೇ ಬತ್ತಿದೆ. ಇದರಿಂದ ಕೃಷಿಕರು ಭಾರೀ ತೊಂದರೆ ಅನುಭವಿಸುವಂತಾಗಿದ್ದು, ಸರಿಯಾದ ಸಮಯಕ್ಕೆ ಗೇಟ್ ಅಳವಡಿಸಿ, ಮಳೆಗಾಲದ ಮುಂಚೆ ತೆಗೆಯಲು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಗ್ರಾಮಸ್ಥರಿಂದ ಕೇಳಿ ಬಂತು.

ಹೊಸಂಗಡಿ ಗ್ರಾ.ಪಂ.ನ ೨೦೨೩-೨೪ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆಯು ಇಂದು ಹೊಸಂಗಡಿ
ಗ್ರಾ.ಪಂ. ಸಭಾಂಗಣದಲ್ಲಿ ಗ್ರಾ.ಪಂ. ಅಧ್ಯಕ್ಷರಾದ ಕರುಣಾಕರ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜರಗಿತು.

ಸಭೆಯಲ್ಲಿ ಗ್ರಾ.ಪಂ. ಮಾಜಿ ಸದಸ್ಯ ಶ್ರೀಪತಿ ಉಪಾಧ್ಯಾಯ ಅವರು ವಿಷಯ ಪ್ರಸ್ತಾವಿಸಿ, ಕಳೆದ ಮಳೆಗಾಲದ ಬಳಿಕ ತೊರ್ಪು ಡ್ಯಾಮ್‌ಗೆ ಸ್ಲ್ಯಾಬ್ ಇಳಿಸಲು ಇಲಾಖೆ ವಿಳಂಬ ಮಾಡಿದೆ. ಅಲ್ಲದೆ ಅಳವಡಿಸಿದ್ದ ಸ್ಲಾಬ್‌ನಿಂದ ನೀರು ಅಧಿಕ ಪ್ರಮಾಣದಲ್ಲಿ ಸೋರಿಕೆಯಾಗಿ ಇದರಿಂದ ಕಳೆದ ಡಿಸೆಂಬರ್-ಜನವರಿಯಲ್ಲೇ ನದಿಯಲ್ಲಿ ನೀರು ಬತ್ತಿಹೋಗಿದೆ. ಅಧಿಕಾರಿಗಳ ವಿಳಂಬ ಧೋರಣೆಯಿಂದ ಕೋಟ್ಯಂತರ ರೂ.ಯ ಯೋಜನೆ ಕೃಷಿಕ ರೈತರಿಗೆ ಪ್ರಯೋಜನಕ್ಕೆ ಬಾರದಂತಾಗಿದೆ. ಹೀಗಾಗಿ ನದಿನೀರಿನ ಹರಿವು ಕಡಿಮೆಯಾಗುವ ಮೊದಲೇ ಸರಿಯಾಗಿ ಸ್ಲ್ಯಾಬ್ ಅಳವಡಿಸಬೇಕು. ಮತ್ತು ಮಳೆಗಾಲದ ಮುಂಗಾರಿನ ಸಮಯದಲ್ಲೇ ಸ್ಲಾಬ್ ತೆಗೆಯಬೇಕು. ತೆಗೆಯಲು ವಿಳಂಬ ಮಾಡಿದರೆ ರೈತನ ಜಮೀನಿಗೆ ನದಿ ನೀರುನುಗ್ಗಿ ಸಮಸ್ಯೆಯಾಗುತ್ತದೆ. ಕಳೆದ ಬಾರಿ ಈ ಸಮಸ್ಯೆ ಜನ ಅನುಭವಿಸಿದ್ದರು ಎಂದರು.
ಈ ಬಗ್ಗೆ ಅಧಿಕಾರಿಗಳಿಗೆ ಸೂಚಿಸುವಂತೆ ಸಭೆಯಲ್ಲಿ ನಿರ್ಣಯಿಸಲಾಯಿತು.

ರಸ್ತೆಯುದ್ದಕ್ಕೂ ಅಪಾಯಕಾರಿ ಗುಂಡಿ!
ಕಾಶಿಪಟ್ಣದಿಂದ ಬಡಕೋಡಿ-ಪೆರಿಂಜೆ, ಹೊಸಂಗಡಿ ಆರಂಬೋಡಿ ಮೂಲಕ ರಸ್ತೆ ಬದಿ ಕಣಿ ತೋಡಿ ಆರ್ಟೆಲ್ ಅಪ್ಟಿಕಲ್ ಒಎಫ್‌ಸಿ ಕೇಬಲ್ ಹಾಕಲಾಗುತ್ತಿದೆ. ರಸ್ತೆಯುದ್ದಕ್ಕೂ ಕಣಿ ತೋಡಿ ಕೆಲವೆಡೆ ಚರಂಡಿಯೇ ಮಾಯವಾಗಿದೆ. ಅಲ್ಲಲ್ಲಿ ಗುಂಡಿತೋಡಿ ಮುಚ್ಚದೇ ಇದ್ದು, ಸವಾರರಿಗೆ ಅಪಾಯ ತಂದೊಡ್ಡಿದೆ. ಗುಂಡಿಗಳನ್ನು ಮುಚ್ಚದೆ ನಿಧಾನಗತಿಯ ಕಾಮಗಾರಿಯಿಂದ ಸಂಚಾರಕ್ಕೆ ತೊಡಕಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರಾದ ಸತೀಶ್ ಶೆಟ್ಟಿ ಕಂಬಳದಡ್ಡ ಆಗ್ರಹಿಸಿದರು. ಇದಕ್ಕೆ ಕೆಲ ಗ್ರಾಮಸ್ಥರು ಧ್ವನಿಗೂಡಿಸಿದರು.

ಬೆಳ್ತಂಗಡಿ ತೋಟಗಾರಿಕೆ ಇಲಾಖೆಯ ಹಿರಿಯ ಉಪನಿರ್ದೇಶಕ ಚಂದ್ರಶೇಖರ್ ಅವರು ಮಾರ್ಗದರ್ಶಿ ಅಧಿಕಾರಿಯಾಗಿ ಸಭೆಯನ್ನು ನಡೆಸಿಕೊಟ್ಟರು. ವಿವಿಧ ಇಲಾಖಾಧಿಕಾರಿಗಳು ಮಾಹಿತಿ ನೀಡಿದರು.
ಪಂಚಾಯತು ಉಪಾಧ್ಯಕ್ಷೆ ನಾಗರತ್ನ, ಸದಸ್ಯರಾದ ಹರಿಪ್ರಸಾದ್ ಪಿ., ಲೋಕೇಶ್ ಬಿ, ಪ್ರಕಾಶ್, ಪ್ರಮೀಳ, ಕಮಲ, ಶಾಂತ, ವಿಶಾಲಾಕ್ಷಿ, ಜಗದೀಶ್ ಹೆಗ್ಡೆ, ಶಾಂತ, ಅಬ್ದುಲ್ ರಹಿಮಾನ್, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಪಂಚಾಯತ್ ಸಿಬ್ಬಂದಿ ಸಹಕರಿಸಿದರು.
ಪಂಚಾಯತು ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಸ್ವಾಗತಿಸಿ, ವರದಿ ಲೆಕ್ಕಪತ್ರ ವಾಚಿಸಿದರು. ಸಭೆಯಲ್ಲಿ ವಾರ್ಡ್‌ಸಭೆಗಳನ್ನು ಬಂದ ಬೇಡಿಕೆಗಳನ್ನು ಓದಿ ಅನುಮೋದನೆ ಪಡೆಯಲಾಯಿತು.

ಸಮ್ಮಾನ-ಗೌರವಾರ್ಪಣೆ
ಈ ಸಂದರ್ಭದಲಿ ಸರ್ಕಾರಿ ಸೇವೆಯಿಂದ ನಿವೃತ್ತಿಯಾದ ಪೆರಿಂಜೆ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ವಸಂತಿ, ಇಂಜಿನಿಯರಿಂಗ್ ಇಲಾಖೆಯ ಕಿರಿಯ ಅಭಿಯಂತರರಾದ ತಮ್ಮಣ್ಣ ಗೌಡ ಪಾಟೀಲ್ ಹಾಗೂ ತಾಲೂಕು ಪಂಚಾಯತ್ ಎನ್‌ಆರ್‌ಎಲ್‌ಎಂ ವಿಷಯ ನಿರ್ವಾಹಕರಾದ ನಿತೇಶ್ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು.

Check Also

ಬೆಳ್ತಂಗಡಿ : ಮನೆಯಂಗಳದಲ್ಲಿ ಆಟವಾಡುತ್ತಿದ್ದ 2 ವರ್ಷದ ಮಗು ಕೆರೆಗೆ ಬಿದ್ದು ಮೃತ್ಯು

ಬೆಳ್ತಂಗಡಿ: ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಮಗುವೊಂದು ತೋಟದ ಕೆರೆಯ ಬಳಿಗೆ ಹೋಗಿ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಗುರುವಾರ ಧರ್ಮಸ್ಥಳದ …

Leave a Reply

Your email address will not be published. Required fields are marked *

You cannot copy content of this page.