ಉಡುಪಿ: ಆನ್ಲೈನ್ ಕಂಪೆನಿಗಳು ಆಫರ್ ಹೆಸರಿನಲ್ಲಿ ಗ್ರಾಹಕರಿಗೆ ಹಾಗೂ ಸ್ಥಳೀಯ ವ್ಯಾಪಾರಿಗಳಿಗೆ ಮೋಸ ಮಾಡುತ್ತಿವೆ. ಆನ್ಲೈನ್ ಕಂಪೆನಿಗಳಿಂದ ಸ್ಥಳೀಯ ಅಂಗಡಿಯವರಿಗೂ ನಷ್ಟವಾಗುತ್ತಿದೆ ಎಂದು ಎಂದು ಉಡುಪಿ, ದಕ್ಷಿಣ ಕನ್ನಡ ಮೊಬೈಲ್ ರೀಟೇಲರ್ ಅಸೋಸಿಯೇಶನ್ ನ ಜಿಲ್ಲಾ ಕಾರ್ಯದರ್ಶಿ ವಿವೇಕ್ ಸುವರ್ಣ ಆರೋಪಿಸಿದ್ದಾರೆ.
ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರದ ನಿಯಮಗಳನ್ನು ಗಾಳಿಗೆ ತೂರಿ ಮಾರ್ಕೆಟಿಂಗ್ ಜಾಹೀರಾತುಗಳನ್ನು ಆನ್ಲೈನ್ನಲ್ಲೇ ಪ್ರಕಟಿಸಿ ಯಾವುದೇ ವಿಶೇಷ ರಿಯಾಯತಿಯನ್ನು ಗ್ರಾಹಕರಿಗೆ ನೀಡುತ್ತಿಲ್ಲ. ಆದರೆ ಸ್ಥಳೀಯ ಅಂಗಡಿಗಳಲ್ಲಿ ಉತ್ತಮ ಆಫರ್ ಜತೆಗೆ ಕಡಿಮೆ ಬೆಲೆಯಲ್ಲಿ ಇದೇ ಮೊಬೈಲ್ಗಳು ಲಭ್ಯವಾಗುತ್ತಿವೆ. ಆದರೆ ಸರಕಾರ ಆನ್ ಲೈನ್ ಕಂಪೆನಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ದೂರಿದರು.
ಆನ್ಲೈನ್ ಸಂಸ್ಥೆಗಳು ಜನರನ್ನು ಆಕರ್ಷಿಸುತ್ತಿವೆಯೇ ಹೊರತು ಯಾವುದೇ ವಿಶೇಷ ಆಫ್ ನೀಡುತ್ತಿಲ್ಲ. ಜನರು ಅದನ್ನೇ ನಂಬಿ ಆಫರ್ ಇವೆ ಎಂದುಕೊಂಡು ಮೋಸ ಹೋಗುತ್ತಿದ್ದಾರೆ. ಅನೇಕರು ಉದ್ಯೋಗವನ್ನು ಕಳೆದುಕೊಳ್ಳುತ್ತಿದ್ದಾರೆ. ಆನ್ಲೈನ್ ಕಂಪೆನಿಗಳಿಂದ ನಷ್ಟ ತಾಳಲಾರೆ ಮಂಗಳೂರಿನಲ್ಲಿ ಕೆಲವು ಮೊಬೈಲ್ ಅಂಗಡಿಗಳು ಮುಚ್ಚಿ ಹೋಗಿವೆ. ನಷ್ಟ ಅನುಭವಿಸಿ ಇಬ್ಬರು ವ್ಯಾಪಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಅಸೋಸಿಯೇಶನ್ ದ.ಕ. ಮತ್ತು ಉಡುಪಿ ಜಿಲ್ಲಾಧ್ಯಕ್ಷ ಶೈಲೇಂದ್ರ ಸರಳಾಯ, ಉಡುಪಿ ಜಿಲ್ಲಾಧ್ಯಕ್ಷ ಸಂದೇಶ ಬಲ್ಲಾಳ್, ಪದಾಧಿಕಾರಿಗಳಾದ ಸುಹಾಸ್ ಕಿಣಿ, ಗುರುದತ್ ಕಾಮತ್ ಉಪಸ್ಥಿತರಿದ್ದರು.