ಕುಂದಾಪುರ: ಶಬರಿಮಲೆ ಯಾತ್ರೆ ಮುಗಿಸಿ ಬಂದು, ಆನೆಗುಡ್ಡೆ ದೇವಸ್ಥಾನದ ಬಳಿ ನಿಲ್ಲಿಸಿದ ಬಸ್ಸಿನ ಟಾಪ್ ನಲ್ಲಿ ಮಲಗಿದ್ದ ವ್ಯಕ್ತಿ ಆಕಸ್ಮಿಕವಾಗಿ ಬಸ್ಸಿನ ಮೇಲಿಂದ ಕೆಳಕ್ಕೆ ಬಿದ್ದು ಅಸ್ವಸ್ಥಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ವರದಿಯಾಗಿದೆ.
ಮೃತರನ್ನು ಬೆಂಗಳೂರು ಕುಂಬಾರಪೇಟೆಯ ಬಾಪೂಜಿ ನಗರದ ನಿವಾಸಿ ಶ್ರೀನಾಥ್ (25) ಎಂದು ಗುರುತಿಸಲಾಗಿದೆ
ಡಿ.28ರಂದು ಯಾತ್ರೆ ಮುಗಿಸಿ ಬಂದು ನಿಲ್ಲಿಸಿದ್ದ ಬಸ್ಸಿನ ಮೇಲೆ ಮಲಗಿದ್ದ ಶ್ರೀನಾಥ ಟಾಪ್ ಮೇಲಿಂದ ಆಕಸ್ಮಿಕವಾಗಿ ಜಾರಿ ನೆಲಕ್ಕೆ ಬಿದ್ದು ತಲೆಗೆ ತೀವ್ರ ಗಾಯಗೊಂಡ ಹಿನ್ನೆಲೆಯಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಡಿ.30ರಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸಹೋದರ ನಾರಾಯಣ ಸ್ವಾಮಿ ನೀಡಿದ ದೂರಿನಂತೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.