ನವದೆಹಲಿ : ನವದೆಹಲಿಯಲ್ಲಿ ಮತ್ತೊಂದು ಪ್ರಿಡ್ಜ್ ಮರ್ಡರ್ ಕಥೆ ನಡೆದಿದ್ದು, ಈ ಬಾರಿ ಪತ್ನಿಯೇ ಪತಿಯನ್ನು ಕೊಂದು ಪೀಸ್ ಪಿಸ್ ಮಾಡಿ ಪ್ರಿಡ್ಜ್ ನಲ್ಲಿಟ್ಟು ಬಳಿಕ ನೆರೆಹೊರೆ ಪ್ರದೇಶಗಳಲ್ಲಿ ಹೂತು ಹಾಕಿದ್ದಾಳೆ.
ಇಡೀ ದೇಶವನ್ನೇ ನಡುಗಿಸಿದ ದೆಹಲಿಯ ಶ್ರದ್ಧಾ ವಾಕರ್ ಕ್ರೂರ ಹತ್ಯೆಯ ಬೆನ್ನಲ್ಲೇ ಇನ್ನೊಂದು ಅಂತಹುದೇ ಸೇಮ್ ಟು ಸೇಮ್ ಮರ್ಡರ್ ನಡೆದಿದೆ. ಅದು ದೆಹಲಿಯಲ್ಲಿ, ವರದಿಗಳ ಪ್ರಕಾರ ಜೂನ್‌ನಲ್ಲಿ ಪಾಂಡವ ನಗರದಲ್ಲಿ ಪೊಲೀಸರಿಗೆ ಮೊದಲ ಬಾರಿಗೆ ಮನುಷ್ಯನ ಕೆಲ ದೇಹದ ಭಾಗಗಳು ಸಿಕ್ಕಿದ್ದವು. ಅವು ಕೊಳೆತ ಸ್ಥಿತಿಯಲ್ಲಿದ್ದ ಕಾರಣ ಕೊಲೆಯಾದ ವ್ಯಕ್ತಿಯ ಗುರುತು ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಬಳಿಕ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಭೀಕರ ವಿವರಗಳು ಬೆಳಕಿಗೆ ಬರುತ್ತಲೇ ಈ ಅಪರಿಚಿತ ದೇಹದ ಭಾಗಗಳು ಆಕೆಯದೇ ಎಂಬ ಬಗ್ಗೆ ತನಿಖೆ ನಡೆಸಲಾಗಿದೆ. ಆದರೆ ಆ ದೇಹದ ಭಾಗಗಳು ಶ್ರದ್ಧಾ ವಾಕರ್‌ಗೆ ಸೇರಿದ್ದಲ್ಲ, ಬದಲಿಗೆ ಅವು ಪಾಂಡವ ನಗರ ನಿವಾಸಿ ಅಂಜನ್ ದಾಸ್ ಎಂಬವರದ್ದು ಎಂಬುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಆರೋಪಿಗಳಾದ ಪೂನಂ ಮತ್ತು ಆಕೆಯ ಮಗ ದೀಪಕ್ ಜೂನ್‌ನಲ್ಲಿ ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ದಾಸ್ ಅವರನ್ನು ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ದಾಸ್‌ಗೆ ಮೊದಲು ನಿದ್ರೆ ಮಾತ್ರೆಗಳನ್ನು ನೀಡಿ ನಂತರ ಕೊಲೆ ಮಾಡಲಾಗಿದೆ. ಬಳಿಕ ಅವರ ದೇಹವನ್ನು ಕತ್ತರಿಸಿ, ತುಂಡುಗಳನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿಟ್ಟಿದ್ದು, ಪಾಂಡವ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೂತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನೂ ಹುಡುಕಿದ್ದಾರೆ. ವೀಡಿಯೋದಲ್ಲಿ ದೀಪಕ್ ತಡರಾತ್ರಿ ಕೈಯಲ್ಲಿ ಚೀಲವೊಂದನ್ನು ಹಿಡಿದುಕೊಂಡು ಹೋಗಿದ್ದು, ಆತನ ತಾಯಿ ಪೂನಂ ದೀಪಕ್‌ನನ್ನು ಹಿಂಬಾಲಿಸುವುದು ಕಂಡುಬಂದಿದೆ. ಆರೋಪಿಗಳು ದಾಸ್ ಅವರ ತುಂಡರಿಸಿದ ದೇಹದ ಭಾಗಗಳನ್ನು ವಿಲೇವಾರಿ ಮಾಡಲು ಚೀಲದಲ್ಲಿ ಕೊಂಡೊಯ್ದಿದ್ದಾರೆ ಎಂದು ಶಂಕಿಸಲಾಗಿದೆ.