ಮಂಗಳೂರು : ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಡಿ 24 ರಂದು ಸಂಜೆ ನಡೆದ ಅಂಗಡಿ ಮಾಲಿಕ ಜಲೀಲ್ ಹತ್ಯೆ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.
ಆರೋಪಿಗಳ ಬಂಧನಕ್ಕೆ ನಾಲ್ಕು ತಂಡಗಳ ರಚನೆ ಮಾಡಲಾಗಿದೆ. ಹತ್ಯೆಯಾದ ಜಲೀಲ್ ಮೃತ ದೇಹದ ಮರಣೋತ್ತರ ಪರೀಕ್ಷೆ ಮಂಗಳೂರಿನ ಖಾಸಾಗಿ ಆಸ್ಪತ್ರೆಯಲ್ಲಿ ನಡೆಯುತ್ತಿದ್ದು ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮರಣೋತ್ತರ ಪರೀಕ್ಷೆ ಬಳಿಕ ಮೃತ ದೇಹವನ್ನು ಜಲೀಲ್ ಕುಟುಂಬಕ್ಕೆ ಹಸ್ತಾಂತರ ಮಾಡಲಾಗುತ್ತಿದೆ . ಬಳಿಕ ಇಂದು ಅಪರಾಹ್ನ ಕೃಷ್ಣಪುರದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ. ಇಬ್ಬರು ಮುಸುಕುದಾರಿಗಳು ಬಂದು ಜಲೀಲ್ ಅವರನ್ನು ಚೂರಿಯಿಂದ ಇರಿದು ಪರಾರಿಯಾಗಿದ್ದರು. ಜಲೀಲ್ ಅವರ ಅಂಗಡಿಯಲ್ಲಿ ಹಾಕಿದ್ದ ಸಿಸಿ ಟಿವಿ ಕೂಡ ಕೆಟ್ಟು ಹೋಗಿದ್ದರಿಂದ ಆರೋಪಿಗಳ ಚಹರೆ ಕೂಡ ಸಿಗುತ್ತಿಲ್ಲ. ಆರೋಪಿಗಳು ಜಲೀಲ್ ಅಂಗಡಿಯ ಹಿಂಬದಿಯಿಂದ ಬಂದು ಕೊಲೆ ಮಾಡಿ ಕತ್ತಲೆಯಲ್ಲೇ ಪರಾರಿಯಾಗಿದ್ದರು. ಈ ಸಂದರ್ಭ ಜಲೀಲ್ ಸಹಾಯಕ್ಕಾಗಿ ಬೊಬ್ಬೆ ಹಾಕಿದ್ದು ಬೊಬ್ಬೆ ಕೇಳಿದ ಸನಿಹದ ಅಂಗಡಿಯವ ಧಾವಿಸಿ ಬಂದಿದ್ದಾರೆ. ಅದಾಗಲೇ ಆರೋಪಿಗಳು ಪರಾರಿಯಾಗಿದ್ದರು. ತೀವ್ರ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಜಲೀಲ್ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆಗೆ ಮೃತ ಪಟ್ಟಿದ್ದರು.