ಮಂಗಳೂರು: ಪುತ್ತೂರಿನ ಯುವತಿ ಕೊಲೆ ಕೃತ್ಯ ಸತ್ಯ ಬಿಚ್ಚಿಟ್ಟ ಎಸ್ಪಿ ರಿಷ್ಯಂತ್‌..!

ಮಂಗಳೂರು: ಪುತ್ತೂರಿನಲ್ಲಿ ನಿನ್ನೆ ಕೊಲೆಯಾದ ಯುವತಿ ಗೌರಿ ಮತ್ತು ಕೊಲೆಗಾರ ಪದ್ಮರಾಜ್‌ ಅವರು ಕಳೆದ 6 ವರ್ಷಗಳಿಂದ ಪರಿಚಿತರಾಗಿದ್ದು, ಇದೀಗ ಯುವತಿಯ ಕೊಲೆಯೊಂದಿಗೆ ಅವರೊಳಗಿನ ಪರಿಚಯ ಮತ್ತು ಪ್ರೀತಿ ಸಹಿತ ಎಲ್ಲವೂ ಅವಸಾನಗೊಂಡಿದೆ. ಮೃತ ಯುವತಿ ಗೌರಿಯ ಮೃತ ದೇಹದ ಮರಣೋತ್ತರ ಪರೀಕ್ಷೆಯನ್ನು ಇಂದು ಮಂಗಳೂರಿನ ವೆನ್ಲಾಕ್‌ ಆಸ್ಪತ್ರೆಯ ಶವಾಗಾರದಲ್ಲಿ ನಡೆಸಿ ಬಳಿಕ ಮೃತ ದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ವೆನ್ಲಾಕ್‌ ಆಸ್ಪತ್ರೆಯ ಆವರಣದಲ್ಲಿ ಅಧಿಕ ಸಂಖ್ಯೆಯಲ್ಲಿ ಜನರು ಸೇರಿದ್ದರು. ಪ್ರಕರಣದ ಕುರಿತಂತೆ ಜಿಲ್ಲಾ ಎಸ್.ಪಿ. ರಿಷ್ಯಂತ್‌ ಸಿ. ಬಿ. ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿ ಗೌರಿ ವಿಟ್ಲದ ಶಾಲೆಯಲ್ಲಿ 9 ನೇ ತರಗತಿಯಲ್ಲಿ ಕಲಿಯುತ್ತಿದ್ದ ಸಂದರ್ಭದಲ್ಲಿಯೇ ಪದ್ಮರಾಜನ ಪರಿಚಯವಾಗಿತ್ತು. ಪರಿಚಯ ಕ್ರಮೇಣ ಪ್ರೀತಿಗೆ ತಿರುಗಿತ್ತು. ಈ 6 ವರ್ಷಗಳ ಅವಧಿಯಲ್ಲಿ ಮಧ್ಯದಲ್ಲೊಮ್ಮೆ ಅವರೊಳಗೆ ಭಿನ್ನಾಭಿಪ್ರಾಯ ಹುಟ್ಟಿಕೊಂಡಿತ್ತು. 2020 ರಲ್ಲಿ ಗೌರಿ ಆತನ ವಿರುದ್ಧ ವಿಟ್ಲ ಪೊಲೀಸ್‌ ಠಾಣೆಗೆ ದೂರು ನೀಡಿದ್ದಳು. ಈ ಸಂದರ್ಭದಲ್ಲಿ ಪೊಲೀಸರು ಇಬ್ಭರನ್ನೂ ಠಾಣೆಗೆ ಕರೆಸಿ ಇನ್ನುಮುಂದೆ ಪರಸ್ಪರ ಮಾತುಕತೆ ಇಲ್ಲ ಎಂಬುದಾಗಿ ಮುಚ್ಚಳಿಕೆಯನ್ನು ಬರೆಸಿ ಕಳುಹಿಸಿದ್ದರು. ಆದರೆ ಆ ಬಳಿಕವೂ ಇಬ್ಬರ ನಡುವೆ ಮಾತುಕತೆ ಮುಂದುವರಿದಿತ್ತು. ಪದ್ಮರಾಜ್‌ ಆಕೆಗೆ ಮೊಬೈಲ್‌ ಪೋನ್‌ ಕೊಡಿಸಿದ್ದನು. ಆದರೆ ಮತ್ತೆ ಇತ್ತೀಚೆಗೆ ಅವರೊಳಗೆ ಭಿನ್ನಾಭಿಪ್ರಾಯ ಬಂದಿದ್ದು, ಆಕೆ ಆತನ ಪ್ರೀತಿಯನ್ನು ನಿರಾಕರಿಸಿದ್ದಳು. ಈ ಹಿನ್ನೆಲೆಯಲ್ಲಿ ನಿನ್ನೆ ಆತ ಬೈಕಿನಲ್ಲಿ ಗೌರಿ ಕೆಲಸ ಮಾಡುತ್ತಿದ್ದ ಪುತ್ತೂರಿನ ಫ್ಯಾನ್ಸಿ ಅಂಗಡಿಗೆ ತೆರಳಿ ಈ ಹಿಂದೆ ಗಿಫ್ಟ್‌ ಕೊಟ್ಟಿದ್ದ ಮೊಬೈಲನ್ನು ಆಕೆಯ ಬ್ಯಾಗಿನಿಂದ ಕಿತ್ತುಕೊಂಡು ಹೋಗಿದ್ದನು. ಬಳಿಕ ಆಕೆ ಇನ್ನೊಂದು ಪೋನ್‌ ನಲ್ಲಿ ಕರೆ ಮಾಡಿ ಮೊಬೈಲ್‌ ಫೋನ್‌ ಹಿಂತಿರುಗಿಸುವಂತೆ ಒತ್ತಾಯಿಸಿದ್ದಳು. ಆತ ವಾಪಸ್‌ ಬರಲು ಒಪ್ಪಿದ್ದರಿಂದ ಗೌರಿ ಮಹಿಳಾ ಪೊಲೀಸ್‌ ಠಾಣೆ ಬಳಿ ತೆರಳಿ ಕಾಯುತ್ತಿದ್ದಳು. ಪದ್ಮರಾಜ್‌ ಅಲ್ಲಿಗೆ ತಲುಪಿದಾಗ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ ಹಾಗೂ ಆತ ಚೂರಿಯಿಂದ ಆಕೆಯ ಕುತ್ತಿಗೆಗೆ ಇರಿದು ಪರಾರಿಯಾಗಿದ್ದಾನೆ ಎಂದು ವಿವರಿಸಿದರು. ಕೊಲೆಗೆ ಮೊದಲು ಫ್ಯಾನ್ಸಿ ಅಂಗಡಿಯಲ್ಲಿ ಆತ ಆಕೆಯ ಜತೆ ಜಗಳ ಮಾಡಿರುವ ಕುರಿತಂತೆ ಸಿಸಿ ಕ್ಯಾಮರಾ ದೃಶ್ಯಾವಳಿ ಇದೀಗ ಪತ್ತೆಯಾಗಿದೆ.

Check Also

ಕಾಪು: ಬಾಲಕಿ ಮೃತ್ಯು!

ಕಾಪು: 11 ವರ್ಷದ ಬಾಲಕಿ ನಿಗೂಢವಾಗಿ ಸಾವನ್ನಪ್ಪಿದ ಘಟನೆ ಉಡುಪಿ ಕಾಪುವಿನ ಮಣಿಪುರ ಗ್ರಾಮದಲ್ಲಿ ನಡೆದಿದೆ. ಸಂದೇಶ್‌ ಅವರ 11 ವರ್ಷದ …

Leave a Reply

Your email address will not be published. Required fields are marked *

You cannot copy content of this page.