December 9, 2024
WhatsApp Image 2023-01-23 at 9.25.09 AM

ರವಿವಾರ ರಾತ್ರಿ ತಾಯಿ ಹಾಗೂ ಮಗಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ನಿಗೂಢ ಘಟನೆಯನ್ನು ಭಾಗಶ: ಬೇಧಿಸುವಲ್ಲಿ ಬೇಡಡ್ಕ ಪೊಲೀಸರು ಸಫಲರಾಗಿದ್ದು, ತಾಯಿ ಮಗಳನ್ನು ಹತ್ಯೆ ಮಾಡಿದ ಬಳಿಕ ಆಕೆ ಕೂಡ ಆತ್ಮಹತ್ಯೆ ಮಾಡಿಕೊಂಡಿರುವುದು ಪೊಲೀಸ್‌ ತನಿಖೆಯಲ್ಲಿ ಮೇಲ್ನೋಟಕ್ಕೆ ಪತ್ತೆಯಾಗಿರುವುದಾಗಿ ತಿಳಿದು ಬಂದಿದೆ.

ಕಾಸರಗೋಡಿನ ಕುಂಡಂಕುಳಿ ನೀರ್ಕಯದ ಟೂರಿಸ್ಟ್ ಚಾಲಕ ಚಂದ್ರನ್‌ರ ಪತ್ನಿ ನಾರಾಯಣಿ (45) ಮತ್ತು ಅವರ ಪುತ್ರಿ ಏಳನೇ ತರಗತಿ ವಿದ್ಯಾರ್ಥಿನಿ ಶ್ರೀನಂದ (12)ಳ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಶ್ರೀನಂದಳ ಮೃತದೇಹ ಮನೆಯೊಳಗೂ, ನಾರಾಯಣಿಯ ಮೃತದೇಹ ಮನೆ ಪಕ್ಕದ ಶೆಡ್‌ನಲ್ಲಿತ್ತು.

ಕೃತ್ಯ ನಡೆದ ವೇಳೆ ಚಂದ್ರನ್ ಟೂರಿಸ್ಟ್ ಬಸ್‌ ವೊಂದರ ಚಾಲಕರಾಗಿ ಊಟಿಗೆ ಹೋಗಿದ್ದರು. ಈ ವೇಳೆ ತಾಯಿ ಮತ್ತು ಮಗಳು ಮಾತ್ರ ಮನೆಯಲ್ಲಿದ್ದರು. ಕುಂಡಂಕುಳಿ ನಿರ್ಕಯದ ಭೀಮುಂಗಾಲ್ ರಸ್ತೆ ಬಳಿಯ ಪೆಟ್ರೋಲ್ ಬಂಕ್ ಹಿಂದುಗಡೆಯ ಗುಡ್ಡೆ ಮೇಲೆ ಇವರ ಮನೆ ಇದೆ. ಅವರಿಬ್ಬರು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.

ಮೂಲಗಳ ಪ್ರಕಾರ,ಶ್ರೀನಂದಳನ್ನು ಮೊದಲು ಹಗ್ಗದಿಂದ ಕುತ್ತಿಗೆ ಬಿಗಿಯಲಾಗಿತ್ತು. ಬಳಿಕ ಆಕೆಯ ಮುಖಕ್ಕೆ ದಿಂಬು ಅಥವಾ ಇತರ ಯಾವುದೋ ವಸ್ತುವನ್ನು ಒತ್ತಿ ಹಿಡಿದು ಉಸಿರುಗಟ್ಟಿಸಿ ಆಕೆಯ ಕೊಲೆಗೈಯ್ಯಲಾಗಿದೆ ಎಂದು ತಿಳಿದು ಬಂದಿದೆ. ಶ್ರೀನಂದಳ ಮೃತದೇಹವನ್ನು ಪೊಲೀಸರು ಮಹಜರು ನಡೆಸಿದಾಗ ಆಕೆಯ ಕುತ್ತಿಗೆ ಭಾಗದಲ್ಲಿ ಹಗ್ಗ ಬಿಗಿದ ಕುರುಹು ಪತ್ತೆಯಾಗಿತ್ತು. ಅದರಿಂದಾಗಿ ತಾಯಿ ಮತ್ತು ಪುತ್ರಿಯ ಮೃತದೇಹಗಳನ್ನು ಪೊಲೀಸರು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಿ ಅಲ್ಲಿ ಪೊಲೀಸ್‌ ಸರ್ಜನ್‌ರಿಂದ ಉನ್ನತಮಟ್ಟದ ಮರಣೋತ್ತರ ಪರೀಕ್ಷೆಗೊಳಪಡಿಸಲಾಗಿತ್ತು.

ಮರಣೋತ್ತರ ಪರೀಕ್ಷೆಯಲ್ಲಿ ಶ್ರೀನಂದಳ ನ್ನು ಉಸಿರುಗಟ್ಟಿಸಿ ಕೊಲೆ ಮಾಡಲಾಗಿದೆ ಎಂಬ ಪ್ರಾಥಮಿಕ ಮಾಹಿತಿ ದೊರೆತಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ತಾಯಿ ನಾರಾಯಣಿಯೇ ಶ್ರೀನಂದಳನ್ನು ಹತ್ಯೆ ಮಾಡಿ ಬಳಿಕ ಆಕೆಯ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ತಿರ್ಮಾನಕ್ಕೆ ಬರಲಾಗಿದೆ

ಆದರೆ ಪುತ್ರಿಯನ್ನು ಕೊಲೆಗೈದು ನಾರಾಯಣಿ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ನಿಖರ ಕಾರಣಗಳು ಪೊಲೀಸರಿಗೆ ಇನ್ನಷ್ಟೆ ಸ್ಪಷ್ಟವಾಗಬೇಕಿದೆ. ಸದ್ಯ ಅದನ್ನು ಭೇದಿಸುವ ಯತ್ನದಲ್ಲಿ ಪೊಲೀಸರು ತೊಡಗಿದ್ದಾರೆ. ಇದರಂತೆ ನಾರಾಯಣಿಯ ಪತಿ ಚಂದ್ರನ್, ಸಂಬಂಧಿಕರು ಮತ್ತು ಇತರರ ಹೇಳಿಕೆಗಳನ್ನು ದಾಖಲಿಸುವ ಕೆಲಸದಲ್ಲೂ ಪೊಲೀಸರು ತೊಡಗಿದ್ದಾರೆ.

ಬೇಕಲ ಡಿವೈಎಸ್ಪಿ ಪಿ.ಕೆ. ಸುನಿಲ್ ಕುಮಾರ್, ಇನ್‌ಸ್ಪೆಕ್ಟರ್‌ ದಾಮೋದರನ್ ಎಂಬವರ ನೇತೃತ್ವದ ಪೊಲೀಸರ ತಂಡ ಈ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿದೆ.

About The Author

Leave a Reply

Your email address will not be published. Required fields are marked *

You cannot copy content of this page.