ಮಂಗಳೂರು: ಬಾಂಬ್ ಸ್ಫೋಟದ ಆರೋಪಿ ಉಗ್ರ ಶಾರೀಕ್ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಪೊಲೀಸರು ಆತನ ಚೇತರಿಕೆ ಕಾಯುತ್ತಿದ್ದು, ಯಾವಾಗ ಬಾಯಿ ಬಿಡ್ತಾನೆ ಅಂತ ಕಾದು ಕುಳಿತಿದ್ದಾರೆ. ಇದೀಗ ಮತ್ತೊಂದು ಟೆನ್ಷನ್ ಶುರುವಾಗಿದೆ.
ಆ ಬಳಿಕವೇ ಉಗ್ರನ ಕೃತ್ಯದ ಆಳ ಅಗಲ ತಿಳಿಯಲಿದೆ. ಒಂದು ವೇಳೆ ಬದುಕುಳಿಯದೇ ಇದ್ರೆ ಎಲ್ಲವೂ ಆತನೊಂದಿಗೇ ಹೋಗುತ್ತೆ ಅನ್ನೋ ಆತಂಕ ಶುರುವಾಗಿದೆ.
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ದ ರೂವಾರಿ ಶಂಕಿತ ಉಗ್ರ ಶಾರೀಕ್ ಶೇ. 45ರಷ್ಟು ಸುಟ್ಟಗಾಯಗಳೊಂದಿಗೆ ಗಂಭೀರ ಸ್ಥಿತಿಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. ಮಾತನಾಡಲು ಆಗಲ್ಲ, ಒಂದು ಕಣ್ಣು ಕಾಣುತ್ತಿಲ್ಲ.
ಇನ್ನೊಂದು ಕಣ್ಣು ಬಿಡೋಕೆ ಆಗ್ತಿಲ್ಲ. ಕೈ ಸುಟ್ಟಿರೋದ್ರಿಂದ ಬರೆಯೋಕು ಆಗ್ತಿಲ್ಲ. ಹೀಗಾಗಿ ಪೊಲೀಸರು ಘಟನೆ ಸಂಬಂಧ ಶಾರೀಕ್ ಹೇಳಿಕೆ ಪಡೆಯೋಕೆ ಆಗ್ತಿಲ್ಲ. ಆದರೆ ಆತ ಚೇತರಿಸಿಕೊಂಡರೆ ಸತ್ಯ ಕಕ್ಕಿಸಲು ಪೊಲೀಸರು ತುದಿಗಾಲಿನಲ್ಲಿ ನಿಂತಿದ್ದಾರೆ.
ಗಂಭೀರ ಸ್ಥಿತಿಯಲ್ಲಿರುವ ಶಾರೀಕ್ ಒಂದು ವೇಳೆ ಸಾವನ್ನಪ್ಪಿದ್ದರೆ ಆತನ ಉಗ್ರ ಚಟುವಟಿಕೆಗಳೂ ಆತನೊಂದಿಗೆ ಸಾಯಲಿದೆ. ಆತ ಈ ಹಿಂದೆ ಏನೆಲ್ಲಾ ಉಗ್ರ ಚಟುವಟಿಕೆ ಮಾಡಿದ್ದ, ಮುಂದೆ ಯಾವ ಪ್ಲಾನ್ ಮಾಡಿದ್ದ, ಆತನೊಂದಿಗಿರುವ ತಂಡ ಯಾವುದು. ಫಂಡಿಂಗ್ ಮಾಡಿದ್ಯಾರು..? ಯಾರೆಲ್ಲಾ ಆಶ್ರಯ ಕೊಟ್ಟಿದ್ದರು, ಉಗ್ರರ ಜೊತೆ ಸಂಪರ್ಕದಲ್ಲಿದ್ನಾ ಅನ್ನೋ ಸಾಕಷ್ಟು ಆಘಾತಕಾರಿ ಮಾಹಿತಿಗಳು ನಾಶವಾಗಲಿದೆ.
ಹೀಗಾಗಿ ಆತನನ್ನು ಹೇಗಾದ್ರೂ ಮಾಡಿ ಬದುಕಿಸಲೇಬೇಕೆಂದು ಪೊಲೀಸರು ವೈದ್ಯರು ತಂಡಕ್ಕೆ ಸೂಚಿಸಿದ್ದಾರೆ. ವೈದ್ಯರೂ ಆತನ ಮೇಲೆ ವಿಶೇಷ ಗಮನ ಇಟ್ಟಿದ್ದು ಬದುಕಿಸುವ ಪ್ರಯತ್ನ ಮಾಡುತ್ತಿದ್ದಾರೆ
ಇನ್ನು ವಿಧಿ ವಿಜ್ಞಾನ ಪ್ರಯೋಗಾಲಯ (FSL) ಪ್ರಾಥಮಿಕ ವರದಿಯಲ್ಲಿ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಶಾರಿಕ್ ತಂದಿದ್ದು ಅಂತಿಂಥ ಬಾಂಬ್ ಅಲ್ಲ. ಆ ಕುಕ್ಕರ್ ಬಾಂಬ್‍ಗೆ ಇಡೀ ಬಸ್ಸನ್ನೇ ಸ್ಫೋಟಿಸುವ ಪವರ್ ಇತ್ತಂತೆ. 3 ಲೀಟರ್ ಕುಕ್ಕರ್ ತುಂಬಾ ಸ್ಫೋಟಕದ ಜೆಲ್ ತಂದಿದ್ದ.
ಡಿಟೋನೇಟರ್ ಕೂಡ ಇದ್ದು ಪ್ಲಸ್ ಮತ್ತು ಮೈನಸ್ ಕನೆಕ್ಟಿಂಗ್ ಕೂಡ ಇತ್ತಂತೆ, ಪ್ಲಸ್ ಮತ್ತು ಮೈನಸ್ ಕನೆಕ್ಟ್ ಆಗದೆ ಶಾರ್ಟ್ ಸರ್ಕ್ಯೂಟ್ ಆಗಿ ಜೆಲ್‍ಗೆ ಬೆಂಕಿ ಹೊತ್ತಿಕೊಂಡು ಘಟನೆ ಸಂಭವಿಸಿದೆ. ಒಂದ್ವೇಳೆ ಡಿಟೊನೇಟರ್ ಮತ್ತು ಜೆಲ್ ಎರಡೂ ಒಂದೇ ಬಾರಿಗೆ ಸ್ಫೋಟಿಸಿದರೆ ಭಯಾನಕ ಘಟನೆಯೇ ನಡೆದು ಹೋಗ್ತಿತ್ತು.
ಶಾರೀಕ್ ಚೇತರಿಸಿಕೊಂಡರೆ ಮಂಗಳೂರು ಸ್ಫೋಟದ ಹಿಂದಿನ ರಹಸ್ಯ ಬಯಲಾಗಲಿದೆ. ಆದರೆ ಆಕಸ್ಮಾತ್ ಶಾರೀಕ್ ಸಾವನ್ನಪ್ಪಿದ್ರೇ ಆತನೊಂದಿಗೆ ರಹಸ್ಯವೂ ಸಮಾಧಿ ಆಗಲಿದೆ.