ಮುಂಬೈ: 27 ವರ್ಷದ ಯುವತಿ ಶ್ರದ್ಧಾ ವಾಲ್ಕರ್ ಹತ್ಯೆ ಪ್ರಕರಣದ ತನಿಖೆ ಚುರುಕುಕೊಂಡಿದ್ದು, ಬಗೆದಷ್ಟೂ ಭೀಕರ ವಿಚಾರಗಳು ಹೊರಬರುತ್ತಿವೆ. ಅಫ್ತಾಬ್ ನನ್ನನ್ನು ಪೀಸ್ ಪೀಸ್ ಮಾಡಿ ಎಸೆಯುತ್ತಾನೆ ಎಂದು ಶ್ರದ್ಧಾ ವಾಲ್ಕರ್ 2 ವರ್ಷದ ಹಿಂದೆಯೇ ಮುಂಬೈ ಪೊಲೀಸರಿಗೆ ದೂರು ನೀಡಿದ್ದಳಂತೆ.
ಹೌದು. ಮಹಾರಾಷ್ಟ್ರದ ಪಲ್ಗರ್‌ನಲ್ಲಿರುವ ಟುಲಿಂಜ್ ಪೊಲೀಸ್ ಠಾಣೆಯಲ್ಲಿ 23 ನವೆಂಬರ್ 2020ರಲ್ಲಿ ಶ್ರದ್ಧಾ ವಾಲ್ಕರ್ ದೂರು ಸಲ್ಲಿಸಿರುವ ಪತ್ರವೊಂದು ಈಗ ಮುನ್ನೆಲೆಗೆ ಬಂದಿದೆ. ಅದರಲ್ಲಿ ಅಫ್ತಾಬ್ ತನಗೆ ಹೊಡೆಯುತ್ತಿದ್ದು ಕೊಲ್ಲುವುದಾಗಿ ಕೂಡ ಬೆದರಿಕೆ ಹಾಕಿದ್ದಾನೆ ಎಂದು ಶ್ರದ್ಧಾ ಉಲ್ಲೇಖಿಸಿದ್ದರು. ಅಷ್ಟೇ ಅಲ್ಲದೆ ಶ್ರದ್ಧಾ ಅಫ್ತಾಬ್‌ನ ವರ್ತನೆಯನ್ನು ಅವನ ಮನೆಯವರಿಗೂ ಹೇಳಿದ್ದಳು. ಆದರೆ ಅವರು ಏನೂ ಮಾಡಲಿಲ್ಲವಂತೆ.
ಹಾಗಿದ್ದರೆ ಪತ್ರದಲ್ಲಿ ಏನಿದೆ?:
”ನನ್ನನ್ನು ಕೊಂದುಹಾಕುವುದಾಗಿ ಅಫ್ತಾಬ್ ಹೆದರಿಸಿದ್ದರಿಂದ ನನಗೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲು ಧೈರ್ಯವಿರಲಿಲ್ಲ. ಈ ಪತ್ರ ಬರೆಯುವ ದಿನ ಅಫ್ತಾಬ್ ನನ್ನನ್ನು ಕೊಲ್ಲಲು ಪ್ರಯತ್ನಿಸಿದ್ದ. ನಿನ್ನನ್ನು ಕೊಂದು ಹಾಕಿ ತುಂಡು ತುಂಡು ಮಾಡಿ ಎಸೆಯುತ್ತೇನೆ ಎಂದು ಕೂಡ ಹೇಳಿದ್ದ. ಕಳೆದ ಆರು ತಿಂಗಳಿನಿಂದ ನನಗೆ ಹೊಡೆಯುತ್ತಾ ಬಂದಿದ್ದಾನೆ, ಬೆದರಿಕೆ ಹಾಕುತ್ತಿದ್ದಾನೆ. ಇದು ಅವನ ಪೋಷಕರಿಗೂ ಗೊತ್ತಿದೆ.
ನಾವು ಸದ್ಯದಲ್ಲಿಯೇ ಮದುವೆಯಾಗಲಿದ್ದೇವೆ ಎಂಬ ಭರವಸೆಯಿಂದ ಇವತ್ತಿನವರೆಗೂ ಅವನ ಜೊತೆ ವಾಸಿಸುತ್ತಿದ್ದೆ. ಅವನ ಕುಟುಂಬದ ಬೆಂಬಲ ಆಶೀರ್ವಾದ ಕೂಡ ಸಿಗಬಹುದೆಂದು ನಂಬಿದ್ದೆ. ಆದರೆ ಇನ್ನು ಮುಂದೆ ಅವನ ಜೊತೆ ವಾಸಿಸಲು ನನಗೆ ಇಚ್ಛೆಯಿಲ್ಲ. ನನ್ನನ್ನು ಎಲ್ಲಿಯಾದರೂ ಕಂಡರೆ ಕೊಂದು ಹಾಕುವುದಾಗಿ ಇಲ್ಲವೇ ಹೊಡೆಯುವುದಾಗಿ ನನಗೆ ಬೆದರಿಕೆ ಹಾಕಿರುವುದರಿಂದ ಅವನಿಂದ ಶಾರೀರಿಕವಾಗಿ ತೊಂದರೆಯಾದರೂ ಆಗಬಹುದು ಎಂದು ಶ್ರದ್ಧಾ ಪೊಲೀಸರಿಗೆ ಬರೆದಿರುವ ಪತ್ರದಲ್ಲಿ ದಾಖಲಾಗಿದೆ.