ತುಮಕೂರು: ಈಗಿನ ಶಾಲಾ ಅವಧಿಯಿಂದ ಮಕ್ಕಳತನವನ್ನೇ ಕಿತ್ತುಕೊಳ್ಳುವಂತಾಗಿದೆ. 7-8 ವರ್ಷದವರೆಗಿನ ಮಕ್ಕಳು ಹೆಚ್ಚು ನಿದ್ರೆ ಮಾಡಬೇಕು. ನಿದ್ರಾಹಿನತೆಯಿಂದ ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್ ಅವರು ಶಾಲಾ ಸಮಯ ಬದಲಾಗಬೇಕು ಎಂದು ಪ್ರತಿಪಾದಿಸಿದ್ದಾರೆ.
ಸಿದ್ಧಗಂಗಾ ಮಠದ ಶ್ರೀ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಭಾನುವಾರ ಶ್ರೀ ಸಿದ್ಧಗಂಗಾ ಹಳೆಯ ವಿದ್ಯಾರ್ಥಿಗಳ ಹಾಗೂ ಹಿತೈಷಿಗಳ ಸಂಘ ಆಯೋಜಿಸಿದ್ದ ಸರ್ವ ಸದಸ್ಯರ 66ನೇ ಮಹಾಧಿವೇಶನದಲ್ಲಿ ‘ಸಿದ್ಧಗಂಗಾ ಶ್ರೀ ಪ್ರಶಸ್ತಿ’ ಸ್ವೀಕರಿಸಿ ಮಾತನಾಡಿದ ಡಾ.ಮಂಜುನಾಥ್, ಕನಿಷ್ಠ ಎರಡನೇ ತರಗತಿವರೆಗೆ ಶಾಲೆಯ ಸಮಯವನ್ನು ಬೆಳಗ್ಗೆ 10 ರಿಂದ ಮಧ್ಯಾಹ್ನ 12.30ರವರೆಗೆ ನಿಗದಿಗೊಳಿಸಬೇಕು ಎಂದು ಆಗ್ರಹಿಸಿದರು.
ಮಕ್ಕಳ ದೈಹಿಕ, ಮಾನಸಿಕ, ಸಾಮಾಜಿಕ ಆರೋಗ್ಯ ಜಾಲಾಡುತ್ತಿರುವುದು ಸಾಮಾಜಿಕ ಜಾಲತಾಣಗಳು. ಮೊಬೈಲ್ ಮಕ್ಕಳ, ಯುವಜನತೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಕಳೆದ 7 ವರ್ಷಗಳಲ್ಲಿ 6 ಸಾವಿರ ಯುವಕರಿಗೆ ಹೃದಯ ಚಿಕಿತ್ಸೆಯನ್ನು ಮಾಡಲಾಗಿದೆ. ಚಿಕ್ಕವಯಸ್ಸಿನಲ್ಲೇ ಒತ್ತಡ ಪ್ರಾರಂಭವಾಗುತ್ತಿದೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಗಾಢಪರಿಣಾಮ ಬೀರುತ್ತಿದೆ. ದೈಹಿಕ ಆರೋಗ್ಯ ಮಾತ್ರವಲ್ಲ ಮಾನಸಿಕ ಆರೋಗ್ಯ ಹದಗೆಡುತ್ತಿದೆ ಎಂದರು.