ಕೊಚ್ಚಿ: ಯುವ ಮಾಡೆಲ್ ಒಬ್ಬಳ ಮೇಲೆ ಕಾರಿನೊಳಗೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದ್ದು, ಈ ಪ್ರಕರಣ ಸಂಬಂಧ ಓರ್ವ ಮಹಿಳೆ ಹಾಗೂ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಗುರುವಾರ (ನ.17) ನಡೆದಿದೆ.ಮದ್ಯದ ಅಮಲಿನಲ್ಲಿ ಯುವಕರು ಮಾಡೆಲ್ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ತಿಳಿದುಬಂದಿದೆ.
ವಿವರಣೆಗೆ ಬರುವುದಾದರೆ, ಸಂತ್ರಸ್ತ ಯುವ ಮಾಡೆಲ್ ತನ್ನ ಫ್ರೆಂಡ್ ಜೊತೆಯಲ್ಲಿ ಗುರುವಾರ ರಾತ್ರಿ 8.30ರ ಸುಮಾರಿಗೆ ಬಾರ್ ಒಂದಕ್ಕೆ ಬಂದಿದ್ದಳು. ಸುಮಾರು 10 ಗಂಟೆ ವೇಳೆ ಇದ್ದಕ್ಕಿದ್ದಂತೆ ಕುಸಿದುಬಿದ್ದಳು. ತಕ್ಷಣ ಕೆಲ ಯುವಕರು ಆಕೆಯನ್ನು ಮನೆಗೆ ಬಿಡುವುದಾಗಿ ಹೇಳಿ, ಆಕೆಯನ್ನು ಎತ್ತಿಕೊಂಡು ತಮ್ಮ ಕಾರಿನ ಒಳಗೆ ಕೂರಿಸಿದ್ದಾರೆ. ಆದರೆ, ಆಕೆಯ ಸ್ನೇಹಿತೆಗೆ ಕಾರಿನಲ್ಲಿ ಹೋಗಲು ನಿರಾಕರಿಸಿದ್ದಾಳೆ. ಬಳಿಕ ಯುವಕರು ನಗರವನ್ನೆಲ್ಲ ಸುತ್ತಾಡಿ ಕಾರಿನ ಒಳಗೆ ಮಾಡೆಲ್ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ್ದಾರೆ. ನಂತರ ಕಾಕ್ಕನಾಡದ ಆಕೆಯ ಮನೆಗೆ ಮುಂದೆ ಡ್ರಾಪ್ ಮಾಡಿ ಅಲ್ಲಿಂದ ಪರಾರಿಯಾಗಿದ್ದಾರೆ. ಸಂತ್ರಸ್ತೆ ಈ ಸಂಗತಿಯನ್ನು ನಿನ್ನೆ (ನ.18) ಬೆಳಗ್ಗೆ ಆಕೆಯ ಫ್ರೆಂಡ್ ಬಳಿ ಹೇಳಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿದೆ.
ನಿನ್ನೆ ಬೆಳಗ್ಗೆ ದೂರು ಸ್ವೀಕರಿಸಿದ ಬೆನ್ನಲ್ಲೇ ಮಾಡೆಲ್ ತೆರಳಿದ್ದ ಬಾರ್ಗೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ. ಬಾರ್ಗೆ ಆರೋಪಿ ಯುವಕರು ನೀಡಿರುವ ಗುರುತಿನ ದಾಖಲೆಗಳಲ್ಲಿ ನಕಲಿ ವಿಳಾಸ ಇರುವುದು ಪತ್ತೆಯಾಗಿದೆ.
ಪೊಲೀಸರು ಸಂತ್ರಸ್ತ ಮಹಿಳೆಯ ಸ್ನೇಹಿತೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆಕೆಯನ್ನು ವಿಚಾರಿಸಿದಾಗ ಮೂವರು ಯುವಕರು ಕೊಡುಂಗಲ್ಲೂರು ಮೂಲದವರು ಎಂದು ತಿಳಿದು ಬಂದಿದೆ. ಶುಕ್ರವಾರ ಸಂಜೆ ವೇಳೆಗೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಅವರನ್ನು ಶನಿವಾರ (ನ.19) ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು.
ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಮಹಿಳೆ ಕೊಚ್ಚಿಯ ಖಾಸಗಿ ಆಸ್ಪತ್ರೆ ಒಂದರಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಪೊಲೀಸರು ಆಕೆಯನ್ನು ಕಲಮಸೇರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಮಹಿಳೆಯ ಸ್ನೇಹಿತೆ ಉದ್ದೇಶಪೂರ್ವಕವಾಗಿಯೇ ಕಾರಿನಲ್ಲಿ ಹೋಗಲು ನಿರ್ಧರಿಸಿದಳು ಎಂದು ತೀರ್ಮಾನಿಸಲಾಗಿದೆ.