ಬಿಹಾರ: ಬಿಹಾರದ ಖಗಾರಿಯಾ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು 23 ಮಹಿಳೆಯರಿಗೆ ಅನಸ್ತೇಷಿಯಾ ನೀಡದೇ ʻಸಂತಾನಹರಣ ಶಸ್ತ್ರಚಿಕಿತ್ಸೆʼ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಸಂತಾನಹರಣ ಶಸ್ತ್ರಚಿಕಿತ್ಸೆ ವೇಳೆ ಮಹಿಳೆಯರಿಗೆ ಅನಸ್ತೇಷಿಯಾ ನೀಡದೇ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದಾರೆ.
ಶಸ್ತ್ರಚಿಕಿತ್ಸೆ ವೇಳೆ ಮಹಿಳೆಯರು ನೋವಿನಿಂದ ಕಿರುಚುತ್ತಾ ಅಳುತ್ತಿದ್ದರೂ, ಅವರ ಬಾಯಿಯನ್ನು ಮುಚ್ಚಿ, ಕೈ ಮತ್ತು ಕಾಲುಗಳನ್ನು ಹಿಡಿದುಕೊಂಡು ಬಲವಂತವಾಗಿ ಆಪರೇಷನ್ ಮಾಡಲಾಗಿದೆ ಎಂದು ಸಂತ್ರಸ್ತ ಮಹಿಳೆಯರು ಆರೋಪಿಸಿದ್ದಾರೆ.
ಗ್ಲೋಬಲ್ ಡೆವಲಪ್‌ಮೆಂಟ್ ಇನಿಶಿಯೇಟಿವ್ ಎಂಬ ಖಾಸಗಿ ಏಜೆನ್ಸಿ ಈ ಮಹಿಳೆಯರಿಗೆ ಆಪರೇಷನ್ ಮಾಡಿಸಿದೆ ಎನ್ನಲಾಗಿದೆ. ಇದೇ ತಿಂಗಳಿನಲ್ಲಿ ಜಿಲ್ಲೆಯ ಪರಬಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಇದೇ ರೀತಿಯ ನಿರ್ಲಕ್ಷ್ಯ ಬಯಲಿಗೆ ಬಂದಿದೆ. ಖಗಾರಿಯಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಅಲೌಲಿ ಬ್ಲಾಕ್‌ನಲ್ಲಿರುವ ಪಿಎಚ್‌ಸಿಯಲ್ಲಿ ನಡೆದ ಘಟನೆಯ ಕುರಿತು ತನಿಖೆಗೆ ಆದೇಶಿಸಿದ್ದಾರೆ ಮತ್ತು ಸಿವಿಲ್ ಸರ್ಜನ್‌ಗೆ ತನಿಖೆಯನ್ನು ಶೀಘ್ರ ಪೂರ್ಣಗೊಳಿಸಲು ಸೂಚಿಸಿದ್ದಾರೆ.
‘ಇತ್ತೀಚೆಗೆ ಅಲೌಲಿಯ ಪಿಎಚ್‌ಸಿಯಲ್ಲಿ 23 ಮಹಿಳೆಯರಿಗೆ ಅರಿವಳಿಕೆ ನೀಡದೇ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗಿದೆ ಎಂದು ವರದಿಗಳಿವೆ. ಸುಮಾರು 30 ಮಹಿಳೆಯರಿಗೆ ಶಸ್ತ್ರಚಿಕಿತ್ಸೆಗೆ ಒಳಗಾಗಲು ನಿರ್ಧರಿಸಲಾಗಿತ್ತು. ಆದ,ರೆ ಏಳು ಮಂದಿ ಭಯದಿಂದ ಸಂಸ್ಥೆಯಿಂದ ಓಡಿಹೋಗಿದ್ದಾರೆ ಮತ್ತು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ’ ಎಂದು ಖಗಾರಿಯಾ ಸಿವಿಲ್ ಸರ್ಜನ್ ಅಮರ್ಕಾಂತ್ ಝಾ ಪಿಟಿಐಗೆ ತಿಳಿಸಿದ್ದಾರೆ. .
ಇದು ಗಂಭೀರ ವೈದ್ಯಕೀಯ ನಿರ್ಲಕ್ಷ್ಯದ ಪ್ರಕರಣವಾಗಿದೆ. ಮಹಿಳೆಯರಿಗೆ ಅರಿವಳಿಕೆ ಇಲ್ಲದೆ ಶಸ್ತ್ರಚಿಕಿತ್ಸಾ ವಿಧಾನಕ್ಕೆ ಒಳಗಾಗುವುದು ಹೇಗೆ? ಶಸ್ತ್ರಚಿಕಿತ್ಸೆ ವೇಳೆ ಅರಿವಳಿಕೆ ಬಳಸುವುದು ಪ್ರಮಾಣಿತ ಅಭ್ಯಾಸವಾಗಿದೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ಕಾರಣರಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಅವರು ಹೇಳಿದರು.