ಪುತ್ತೂರು: ಕೆಡಿಪಿ ಸದಸ್ಯರೋರ್ವರು ಬಿಜೆಪಿ ಮುಖಂಡರು, ಶಾಸಕರು, ಸಂಸದರ ವಿರುದ್ಧ ಮಾತನಾಡಿದ್ದಾರೆ ಎಂಬ ಆಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇಬ್ಬರು ವ್ಯಕ್ತಿಗಳು ಮಾತನಾಡುತ್ತಿರುವ ಆಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಬ್ಬರು ವ್ಯಕ್ತಿಗಳಲ್ಲಿ ಓರ್ವ ವ್ಯಕ್ತಿ ಬಿಜೆಪಿ ಬೆಂಬಲಿತ ಕೆಡಿಪಿ ಸದಸ್ಯ ಅಬ್ದುಲ್ ಕುಂಞ ಎಂದು ತಿಳಿದು ಬಂದಿದೆ.
‘ಆಡಿಯೋದಲ್ಲಿ ಹಲವು ಬಿಜೆಪಿ ಮುಖಂಡರ, ಕಾಂಗ್ರೆಸ್ ಮುಖಂಡರ ಹೆಸರುಗಳನ್ನು ಪ್ರಸ್ತಾಪಿಸಲಾಗಿದ್ದು, ಪುತ್ತೂರು ಶಾಸಕರನ್ನು ಸಂಸದರು ಯಾವುದೇ ಕೆಲಸ ಮಾಡದ ರೀತಿ ಹಿಡಿದಿಟ್ಟಿದ್ದಾರೆ’ ಎಂದು ಹೇಳಲಾಗಿದೆ.
‘ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷ ಎರಡು ಒಂದೇ ಆಗಿದೆ., ಒಂದೇ ನಾಣ್ಯದ ಎರಡು ಮುಖಗಳಿವು. ಸಂಸದರು, ಶಾಸಕರನ್ನು ಹಿಡಿದಿಟ್ಟುಕೊಂಡಿದ್ದಾರೆ. ಈ ಹಿನ್ನೆಲೆ ಶಾಸಕರಿಗೆ ಪುತ್ತೂರಿನಲ್ಲಿ ಬೆಲೆ ಇಲ್ಲದಂತಾಗಿದೆ. ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಮತ್ತು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಉಪಾಧ್ಯಕ್ಷರು ಇಬ್ಬರು ಸಂಬಂಧಿಕರು ಈಗಾಗಿ ಎರಡು ಪಕ್ಷಗಳು ಜೊತೆಯಾಗಿಯೇ ಇವೆ., ಪುಲ್ವಾಮಾ ದಾಳಿ ಮತ್ತು ಸರ್ಜಿಕಲ್ ಸ್ಟೈಕ್ ಚುನಾವಣಾ ಅಸ್ತ್ರವಾಗಿದೆ., ಪ್ರವೀಣ್ ನೆಟ್ಟಾರು ಹತ್ಯೆಗೆ ಬಿಜೆಪಿಯೇ ಕಾರಣ’ ಎಂದೆಲ್ಲಾ ಮಾತನಾಡಿಕೊಳ್ಳಲಾಗಿದೆ.
ಆಡಿಯೋ ವೈರಲ್ ಆಗುತ್ತಿರುವ ಬೆನ್ನಲ್ಲೇ ಸಾರ್ವಜನಿಕ ವಲಯ ಹಾಗೂ ರಾಜಕೀಯ ವಲಯಗಳಲ್ಲಿ ಚರ್ಚೆಗಳು ಪ್ರಾರಂಭವಾಗಿದ್ದು, ಬಿಜೆಪಿ ಬೆಂಬಲಿತ ವ್ಯಕ್ತಿಯೇ ಪಕ್ಷದ ಮುಖಂಡರ ಬಗ್ಗೆ ಕೀಳಾಗಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಈ ಬಗೆಗಿನ ಆಡಿಯೋ ವೈರಲ್ ಆಗಿದ್ದು, ಇದರ ಮುಂದಿನ ವಿಚಾರ-ವಿವಾದ ಎಲ್ಲಿ ಹೋಗಿ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ..