ದೆಹಲಿ ಕೊಲೆ ಪ್ರಕರಣ: ಇನ್ನೂ ಸಿಗದ ಶ್ರದ್ಧಾ ತಲೆ, ಮೊಬೈಲ್ – ಹಾಗಿದ್ದರೆ ಈಗ ಇರುವ ಸಾಕ್ಷ್ಯಗಳೇನು..? ಇಲ್ಲಿದೆ ಮಾಹಿತಿ

ದೇಶವನ್ನೇ ನಡುಗಿಸಿರುವ ಸೆನ್ಸೇಷನಲ್‌ ದೆಹಲಿ ಕೊಲೆ ಪ್ರಕರಣದಲ್ಲಿ ಬಿಟ್ಟುಹೋದ ಕೊಂಡಿಗಳನ್ನು ಕೂಡಿಸಲು, ಸಾಕ್ಷ್ಯಗಳನ್ನು ಕಲೆಹಾಕಲು ಪೊಲೀಸರು ತೀವ್ರವಾಗಿ ಹೆಣಗಾಡುತ್ತಿದ್ದಾರೆ. ಕೊಲೆ ಘಟಿಸಿ ಆರು ತಿಂಗಳೇ ಆಗಿರುವುದರಿಂದ ಸಾಕ್ಷಿಗಳನ್ನು ಒಗ್ಗೂಡಿಸಲು ಕಷ್ಟಪಡಬೇಕಾಗಿದೆ.

ಮೇ 18ರಂದು ಅಫ್ತಾಬ್‌ ಪೂನಾವಾಲಾ ತನ್ನ ಲಿವ್‌ ಇನ್‌ ಪಾರ್ಟ್ನರ್‌ ಶ್ರದ್ಧಾಳನ್ನು ಉಸಿರುಗಟ್ಟಿಸಿ ಕೊಂದುಹಾಕಿದ್ದ. ಮರುದಿನ ಒಂದು ಫ್ರಿಜ್‌ ಮತ್ತು ಚೂರಿ ತಂದಿದ್ದ. ದೇಹವನ್ನು ಚೂರುಗಳಾಗಿ ಕತ್ತರಿಸಿ ಪ್ರತಿರಾತ್ರಿ ಹೋಗಿ ತುಣುಕುಗಳನ್ನು ಕಾಡಿನಲ್ಲಿ ಚೆಲ್ಲಿ ಬರುತ್ತಿದ್ದ. ಹಲವಾರು ಮೂಳೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರೂ ಶ್ರದ್ಧಾಳ ತಲೆ ಹಾಗೂ ಮೊಬೈಲ್‌ ಇನ್ನೂ ಪತ್ತೆಯಾಗಿಲ್ಲ. ಅಫ್ತಾಬ್‌ ಕೂಡ ತನಿಖೆಗೆ ಸಹಕರಿಸುತ್ತಿಲ್ಲ.

ಮೇ 18ರಂದು ಕೊಲೆಯ ದಿನ ಅವರಿಬ್ಬರೂ ಧರಿಸಿದ್ದ ಬಟ್ಟೆಗಳು ಕೂಡ ಪತ್ತೆಯಾಗಬೇಕಿವೆ. ಅಫ್ತಾಬ್‌ ಹೇಳಿದಂತೆ ಆತ ಅವುಗಳನ್ನು ಒಂದು ಗಾರ್ಬೇಜ್‌ ವಾಹನಕ್ಕೆ ಎಸೆದಿದ್ದ.‌

ಹಾಗಿದ್ದರೆ ಪೊಲೀಸರ ಬಳಿ ಈಗ ಇರುವ ಸಾಕ್ಷ್ಯಗಳೇನು?

  1. ದೇಹದ 35 ಚೂರುಗಳನ್ನು ಬಿಸಾಡಿದ್ದೆ ಎಂದು ಅಫ್ತಾಬ್‌ ಹೇಳಿರುವ ಕಾಡಿನಿಂದ 10- 13 ಮೂಳೆಗಳನ್ನು ಪೊಲೀಸರು ಸಂಗ್ರಹಿಸಿದ್ದಾರೆ.
  2. ಮೂಳೆಗಳನ್ನು ಫಾರೆನ್ಸಿಕ್‌ ಲ್ಯಾಬ್‌ಗೆ ಕಳುಹಿಸಲಾಗಿದ್ದು, ಅದು ಯಾವುದೇ ಬೇರೆ ಪ್ರಾಣಿಯದ್ದಲ್ಲ ಎಂಬುದನ್ನು ರುಜುವಾತುಪಡಿಸಬೇಕಿದೆ.
  3. ಅಫ್ತಾಬ್-‌ ಶ್ರದ್ಧಾ ಇದ್ದ ಛತತ್ತರ್‌ಪುರ್‌ನ ಫ್ಲ್ಯಾಟ್‌ನಲ್ಲಿ ನೆತ್ತರಿನ ಕಲೆಗಳು ಪತ್ತೆಯಾಗಿವೆ. ಇದನ್ನು ಪರೀಕ್ಷೆಗೆ ಕಳಿಸಲಾಗಿದೆ.
  4. ಮೂಳೆಗಳ, ನೆತ್ತರಿನ ಡಿಎನ್‌ಎ ಹೋಲಿಕೆಗಾಗಿ ಶ್ರದ್ಧಾಳ ತಂದೆಯ ಡಿಎನ್‌ಎ ಮಾದರಿ ಸಂಗ್ರಹಿಸಲಾಗಿದೆ.
  5. ಅಫ್ತಾಬ್‌ನ ಫ್ಲ್ಯಾಟ್‌ನ ನೀರಿನ ಬಿಲ್‌ 300 ರೂ. ಬಾಕಿಯಿದ್ದು, ಇದು ಭಾರಿ ಪ್ರಮಾಣದ ನೀರನ್ನು ಆತ ಕ್ಲೀನಿಂಗ್‌ಗೆ ಬಳಸಿದ್ದ ಎಂಬುದಕ್ಕೆ ಸಾಕ್ಷಿಯಾಗಿದೆ.
  6. ಅಫ್ತಾಬ್‌ನ ಚಲನವಲನದ ಸಾಕ್ಷಿಗಾಗಿ ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ ದಾಖಲೆಗಳನ್ನು ಕಲೆಹಾಕಲಾಗುತ್ತಿದೆ. ಆದರೆ ಇದು ಕಷ್ಟ. ಯಾಕೆಂದರೆ ಹೆಚ್ಚಿನ ಸಿಸಿಟಿವಿಗಳು ಕಳೆದ 15 ದಿನಗಳ ರೆಕಾರ್ಡನ್ನಷ್ಟೇ ಇಟ್ಟುಕೊಂಡಿರುತ್ತವೆ. ಇಲ್ಲಿ 6 ತಿಂಗಳ ದಾಖಲೆ ಬೇಕಾಗಿದೆ.
  7. ಶ್ರದ್ಧಾಳ ವಸ್ತುಗಳನ್ನು ಹೊಂದಿದ ಬ್ಯಾಗೊಂದು ಫ್ಲ್ಯಾಟ್‌ನಲ್ಲಿ ಪತ್ತೆಯಾಗಿದೆ.
  8. ಅಫ್ತಾಬ್‌ನ ನಾರ್ಕೋ ಅನಾಲಿಸಿಸ್‌ಗೆ ದೆಹಲಿ ಪೊಲೀಸರು ಕೋರ್ಟ್‌ಗೆ ಅರ್ಜಿ ಹಾಕಿದ್ದಾರೆ. ಈತ ನಿಜ ಹೇಳುತ್ತಿದ್ದಾನೆಯೇ ಅಥವಾ ತನಿಖೆಯ ಹಾದಿ ತಪ್ಪಿಸುತ್ತಿದ್ದಾನೆಯೇ ಎಂಬುದು ಇದರಿಂದ ಗೊತ್ತಾಗಲಿದೆ.
  9. ಮೇ ತಿಂಗಳಲ್ಲಿ ಶ್ರದ್ಧಾಳ ಕೊಲೆಯ ಬಳಿಕ ಈತ ಕೈಯ ಗಾಯದ ಸಿಕಿತ್ಸೆಗಾಗಿ ವೈದ್ಯರೊಬ್ಬರನ್ನು ಭೇಟಿ ಮಾಡಿದ್ದ. ಹಣ್ಣು ಕತ್ತರಿಸುವಾಗ ಉಂಟಾದ ಗಾಯ ಎಂದಿದ್ದ. ಈ ಸಂದರ್ಭದಲ್ಲಿ ಆತ ತೀವ್ರ ಚಡಪಡಿಕೆಯಲ್ಲಿದ್ದ ಎಂದಿದ್ದಾರೆ ವೈದ್ಯರು.
  10. ಶ್ರದ್ಧಾಳನ್ನು ಕೊಂದ ಬಳಿಕ ಆಕೆಯ ಬ್ಯಾಂಕ್‌ ಖಾತೆಯನ್ನು ಆಪ್‌ ಮೂಲಕ ಆಪರೇಟ್‌ ಮಾಡಿದ್ದ ಅಫ್ತಾಬ್‌, ಅದರಿಂದ ತನ್ನ ಖಾತೆಗೆ 54,000 ರೂ.ಗಳನ್ನು ಟ್ರಾನ್ಸ್‌ಫರ್‌ ಮಾಡಿದ್ದ.

Check Also

ಉಡುಪಿ: ಪೆಟ್ರೋಲ್ ಬಂಕ್ ಸಿಬ್ಬಂದಿ ಮೇಲೆ ಯುವಕರಿಂದ ಮಾರಣಾಂತಿಕ ಹಲ್ಲೆ

ಉಡುಪಿ: ತಡರಾತ್ರಿ ಪೆಟ್ರೋಲ್ ಹಾಕದೇ ಇದ್ದದ್ದಕ್ಕೆ ಬಂಕ್ ಸಿಬ್ಬಂದಿ ಮೇಲೆ ಯುವಕರು ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಉಡುಪಿ ನಗರದ …

Leave a Reply

Your email address will not be published. Required fields are marked *

You cannot copy content of this page.