ಭಟ್ಕಳ: ಉತ್ತರ ಕನ್ನಡದ ಭಟ್ಕಳದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಇಬ್ಬರು ಯುವಕರು ದಾರುಣ ಅಂತ್ಯ ಕಂಡಿದ್ದಾರೆ.
ಭಟ್ಕಳ NH66ರ ಮೂಡ್ ಭಟ್ಕಳ ಬೈಪಾಸ್ ಬಳಿ ಬೈಕ್ ಮತ್ತು ಲಾರಿ ನಡುವೆ ಢಿಕ್ಕಿ ಸಂಭವಿಸಿದ್ದು ಬೈಕ್ ನಲ್ಲಿದ್ದ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗುರುವಾರ ತಡರಾತ್ರಿ ಈ ಭೀಕರ ರಸ್ತೆ ಅವಘಡ ಸಂಭವಿಸಿದೆ. ಅಪಘಾತದಲ್ಲಿ ಸಾವಿಗೀಡಾದವರನ್ನು ತಲಾಂದಸಬ್ಬತ್ತಿ ನಿವಾಸಿ ಶೇಖರ್ ಸುಬ್ರಮಣ್ಯ ನಾಯ್ಕ (25) ಹಾಗೂ ಲೋಕೇಶ್ ಮಂಜುನಾಥ್ ನಾಯ್ಕ (30)ಎಂದು ಗುರುತಿಸಲಾಗಿದೆ. ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಈ ಯುವಕರಿಬ್ಬರು ನಗರದ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ಊಟ ಮುಗಿಸಿ ಹೋಟೆಲ್ ನಲ್ಲಿ ವಿಶ್ರಾಂತಿ ಪಡೆಯಲು ಶಂಶುದ್ದೀನ್ ಸರ್ಕಲ್ ಗೆ ಹೋಗುತ್ತಿದ್ದ ವೇಳೆ ಮೂಡ್ ಭಟ್ಕಳ ಬೈಪಾಸ್ ಬಳಿ ಮಧ್ಯ ರಾತ್ರಿ 12.30ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಲಾರಿ ಪಲ್ಟಿಯಾಗಿದ್ದು, ಬೈಕ್ ಜಖಂಗೊಂಡಿದೆ. ಭಟ್ಕಳ ಪೊಲೀಸರು ಘಟನಾ ಸ್ಥಳ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.