ಬೆಂಗಳೂರು: ತಾನು ಜೈಲಿಗೆ ಹೋಗಲು ಪ್ರೀತಿಸಿದ ಹುಡುಗಿಯೇ ಕಾರಣ ಎಂದು ಯುವತಿ ಮೇಲಿನ ಕೋಪಕ್ಕೆ ಆಕೆಯ ಸ್ಕೂಟರ್ಗೆ ಬೆಂಕಿಯಿಟ್ಟ ಪಾಗಲ್ ಪ್ರೇಮಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಕ್ರಂ ಬಂಧಿತ ಯುವಕ.
ಡಿ.12 ರಂದು ಹಲಸೂರಿನಲ್ಲಿರುವ ಯುವತಿ ಮನೆ ಬಳಿ ಹೋಗಿ ಸ್ಕೂಟರ್ ಮೇಲೆ ಪೆಟ್ರೋಲ್ ಸುರಿದು ಯುವಕ ಬೆಂಕಿ ಹಚ್ಚಿ ಪರಾರಿಯಾಗಿದ್ದ. ವಿಕ್ರಂ ಕಳೆದ ಮೂರು ವರ್ಷಗಳಿಂದ ಯುವತಿ ಪ್ರೀತಿಸುತ್ತಿದ್ದ. ಅಲ್ಲದೇ ಡ್ರಗ್ ಪೆಡ್ಲಿಂಗ್ನಲ್ಲಿ ತೊಡಗಿಸಿಕೊಂಡಿದ್ದ. ಈ ಬಗ್ಗೆ ಅರಿತ ಯುವತಿ, ಅಪರಾಧ ಕೃತ್ಯವೆ ಎಸಗದಂತೆ ಬೈದು ಬುದ್ಧಿ ಹೇಳಿದರೂ ವಿಕ್ರಂ ಬಿಟಿಎಂ ಲೇಔಟ್, ಕೋರಮಂಗಲ, ಮಡಿವಾಳ ಸೇರಿದಂತೆ ವಿವಿಧ ಕಡೆ ಡ್ರಗ್ಸ್ ದಂಧೆಯಲ್ಲಿ ತೊಡಗಿಸಿಕೊಂಡಿರುವುದನ್ನು ಮುಂದುವರೆಸಿದ್ದ. ಅರೆಸ್ಟ್ ಮಾಡಿಸಿದರೆ ಬುದ್ಧಿ ಬರುತ್ತೆ ಎಂದು ಯುವತಿ ಭಾವಿಸಿ, ಯುವಕನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಸಂಬಂಧ ಮಡಿವಾಳ ಪೊಲೀಸರು ಡ್ರಗ್ಸ್ ಕೇಸ್ನಲ್ಲಿ ವಿಕ್ರಂನನ್ನ ಬಂಧಿಸಿದ್ದರು. ಎಂಟು ತಿಂಗಳ ಬಳಿಕ ಜಾಮೀನು ಪಡೆದು ಹೊರಬಂದಿದ್ದ ವಿಕ್ರಂ, ತನ್ನ ಬಂಧನಕ್ಕೆ ಯುವತಿಯೇ ಕಾರಣ ಎಂದು ತಿಳಿದು ಆಕೆ ಮನೆ ಬಳಿ ಹೋಗಿ ಸ್ಕೂಟರ್ಗೆ ಬೆಂಕಿ ಹಚ್ಚಿದ್ದಾನೆ. ಈ ಸಂಬಂಧ ಹಲಸೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಆರೋಪಿ ಬಂಧಿಸಿದ್ದಾರೆ.