ಉಡುಪಿ: ಕರ್ನಾಟಕ ಬ್ಯಾಂಕ್ ನ ಲೀಗಲ್ ಆಫೀಸರ್ ಒಬ್ಬರ ಮೃತದೇಹವು ಅವರ ಮನೆಯಲ್ಲಿ ಬೆಂಕಿ ಹೊತ್ತಿಕೊಂಡು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಲೀಗಲ್ ಆಫೀಸರ್ ರಾಜ್ ಗೋಪಾಲ್ ಸಾಮಗ(42) ಮೃತಪಟ್ಟವರು. ಕೃಷ್ಣಮಠ ಸಮೀಪದ ವಾದಿರಾಜ ರಸ್ತೆಯಲ್ಲಿರುವ ಕೃಷ್ಣ ಸಾಮಗ ಅವರ ಮನೆಯಲ್ಲಿ ಹೊಗೆಯನ್ನು ಕಂಡು ನೆರೆ ಮನೆಯವರು ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಮನೆಯವರು ತಕ್ಷಣ ಪೊಲೀಸರಿಗೆ ಹಾಗೂ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಉಡುಪಿ ಅಗ್ನಿಶಾಮಕ ದಳ ಹಾಗೂ ನಗರ ಠಾಣೆಯ ಪೊಲೀಸರು ಕೋಣೆ ಬಾಗಿಲು ಒಳಗಡೆಯಿಂದ ಲಾಕ್ ಆಗಿದ್ದ ಕಾರಣ ಬಾಗಿಲನ್ನು ಒಡೆದು ಪರಿಶೀಲಿಸಿದಾಗ ರಾಜ್ ಗೋಪಾಲ್ ಸಾಮಗ ಅವರ ಮೃತ ದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇವರು ಕೋಣೆಯಲ್ಲಿ ಲ್ಯಾಪ್ಟಾಪ್ ಹಾಗೂ ಮೊಬೈಲ್ ನಲ್ಲಿ ಕೆಲಸ ಮಾಡುತ್ತಿದ್ದ ಕಾರಣ ಮೊಬೈಲ್ ಸ್ಪೋಟಗೊಂಡು ಬೆಂಕಿ ಹತ್ತಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಹೈದರಾಬಾದ್ ನ ಶಾಖೆಯಲ್ಲಿ ಕರ್ತವ್ಯದಲ್ಲಿದ್ದ ಗೋಪಾಲ್ ಅವರು ಒಂದು ತಿಂಗಳ ಹಿಂದೆ ಮಂಗಳೂರಿಗೆ ವರ್ಗಾವಣೆ ಆಗಿದ್ದರು. ಮೃತರು ತಂದೆ, ತಾಯಿ, ಪತ್ನಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.