

ಹುಬ್ಬಳ್ಳಿ: ಪುಣೆ ನಗರದಿಂದ ಉಡುಪಿಗೆ ಹೋಗುತ್ತಿದ್ದ ಬಸ್‌ನ ಹಿಂದಿನ ಚಕ್ರ ಬ್ಲಾಸ್ಟ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಪರಿಣಾಮ ಖಾಸಗಿ ಬಸ್ ನಡು ರಸ್ತೆಯಲ್ಲಿಯೇ ಹೊತ್ತಿ ಉರಿದಿದೆ. ಬಸ್‌ನಲ್ಲಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಹುಬ್ಬಳ್ಳಿಯ ಕಾರವಾರ ರಸ್ತೆಯ ಬಳಿ ರವಿವಾರ ಬೆಳಗಿನ ಜಾವ 2.45ರ ಸುಮಾರಿಗೆ ನಡೆದಿದೆ.

ರೇಷ್ಮಾ ಟ್ರಾವೆಲ್ಸ್ ಕಂಪನಿಗೆ ಸೇರಿದ ಖಾಸಗಿ ಬಸ್ ನಿನ್ನೆ ಪುಣೆ ನಗರದಿಂದ ಉಡುಪಿಯತ್ತ ಹೋಗುತ್ತಿದ್ದಾಗ ಹು-ಧಾರವಾಡ ಬೈಪಾಸ ಬಳಿಯ ಕಾರವಾರ ರಸ್ತೆಯ ಬಳಿ ಬಸ್‌ನ ಹಿಂದಿನ ಚಕ್ರ ಸ್ಫೋಟಗೊಂಡು ಬೆಂಕಿ ಕಾಣಿಸಿಕೊಂಡ ಪರಿಣಾಮ ಚಾಲಕ ತಕ್ಷಣವೇ ಬಸ್ ನಿಲ್ಲಿಸಿ ಬಸ್‌ನಲ್ಲಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರನ್ನು ಇಳಿಸಿದ್ದಾನೆ.

ನೋಡ ನೋಡುತ್ತಿದ್ದಂತೆ ಬೆಂಕಿ ಸಂಪೂರ್ಣವಾಗಿ ಬಸ್‌ಗೆ ಆವರಿಸಿದ ಪರಿಣಾಮ ಖಾಸಗಿ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ. ಚಾಲಕನ ಸಮಯ ಪ್ರಜ್ಞೆಯಿಂದ ಬಸ್‌ನಲ್ಲಿದ್ದ ಪ್ರಯಾಣಿಕರ ಜೀವ ಉಳಿದಿದೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.