ಇಂದೋರ್ : ಎಂಜಿಎಂ ವೈದ್ಯಕೀಯ ಕಾಲೇಜಿನ ರ್ಯಾಗಿಂಗ್ ಪ್ರಕರಣವನ್ನ ಮಧ್ಯಪ್ರದೇಶದ ಇಂದೋರ್ನ ಪೊಲೀಸರು ಅತ್ಯಂತ ವಿಶಿಷ್ಟ ರೀತಿಯಲ್ಲಿ ಭೇದಿಸಿದ್ದಾರೆ. ಜುಲೈ 24ರಂದು ಕಾಲೇಜಿನಲ್ಲಿ ರ್ಯಾಗಿಂಗ್ ನಡೆದಿರುವ ಬಗ್ಗೆ ಪೊಲೀಸರಿಗೆ ದೂರು ಬಂದಿತ್ತಾದ್ರೂ, ಇದನ್ನ ನೀಡಿದ್ಯಾರು.?
ಯಾರನ್ನ ರ್ಯಾಗಿಂಗ್ ಮಾಡಲಾಗ್ತಿದೆ ಅನ್ನೋ ಯಾವ ಮಾಹಿತಿಯೂ ಸಿಗದ ಕುರುಡು ಪ್ರಕರಣವಾಗಿತ್ತು. ಹೀಗಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸಾಕ್ಷ್ಯಾಧಾರಗಳನ್ನ ಸಂಗ್ರಹಿಸಲು ಪೊಲೀಸರು ರಹಸ್ಯ ಪೊಲೀಸ್ ಅಧಿಕಾರಿ ಶಾಲಿನಿ ಚೌಹಾಣ್ ಅವ್ರನ್ನ ನೇಮಿಸಿದ್ದಾರೆ.
ಈ ಕುರುಡು ರ್ಯಾಗಿಂಗ್ ಪ್ರಕರಣವನ್ನ ಹೇಗೆ ಬಯಲಿಗೆಳೆಯಲು ಸಜ್ಜಾದ ಶಾಲಿನಿ, ವೈದ್ಯಕೀಯ ವಿದ್ಯಾರ್ಥಿ ಎಂದು ಕಾಲೇಜಿಗೆ ಎಂಟ್ರಿ ಕೊಟ್ಟಿದ್ದಾರೆ. ನಂತ್ರ ಕಾಲೇಜಿನಲ್ಲಿ ಗೆಳೆಯರನ್ನ ಸಂಪಾದಿಸಿ, ಕ್ಯಾಂಟೀನ್’ನಲ್ಲಿ ಕಾಲ ಕಳೆದು, ವಿದ್ಯಾರ್ಥಿಗಳಿಗೆ ಹತ್ತಿರವಾಗಿದ್ದಾರೆ. ಈ ರೀತಿ ಸುಮಾರು 5 ತಿಂಗಳ ಕಾಲ ಈ ಕಾರ್ಯಾಚರಣೆಯಲ್ಲಿ ತೊಡಗಿದ ಶಾಲಿನಿ, ರ್ಯಾಗಿಂಗ್ ಪ್ರಕರಣವನ್ನ ಬಯಲಿಗೆಳೆಯಲು ಅವರು ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಿದರು.
ಕ್ಯಾಂಟೀನ್ನಲ್ಲೇ ಐದರಿಂದ ಆರು ಗಂಟೆ ಕಾಲ ಕಳೆಯುತ್ತಿದ್ದ ಶಾಲಿನಿ
ನಮ್ಮ ಹಿರಿಯ ಅಧಿಕಾರಿ ಕೆಲವು ವಿದ್ಯಾರ್ಥಿಗಳನ್ನ ಗುರುತಿಸಿದ್ದರು ಎಂದು ಹೇಳುವ ಶಾಲಿನಿ, ತಾನು ಪ್ರತಿದಿನ ಐದರಿಂದ ಆರು ಗಂಟೆಗಳ ಕಾಲ ಕ್ಯಾಂಟೀನ್ನಲ್ಲಿ ಕಳೆಯುತ್ತಿದ್ದೆ ಎಂದರು. ನಾನು ಇಡೀ ದಿನ ತಿರುಗಾಡುವುದಿಲ್ಲ, ಆದರೆ ಕೆಲಸ ಮಾಡುತ್ತಿದ್ದೆ. ನಾನು ಕ್ಯಾಂಟೀನ್ನಲ್ಲಿ ವಿವಿಧ ರೀತಿಯ ಜನರೊಂದಿಗೆ ಮಾತನಾಡುತ್ತಿದ್ದೆ. ನಿಧಾನವಾಗಿ, ಫ್ರೆಶರ್ಗಳನ್ನ ರ್ಯಾಗಿಂಗ್ ಮಾಡುವವರನ್ನ ಗುರುತಿಸಲು ಪ್ರಾರಂಭಿಸಿದೆವು.
ವಿದ್ಯಾರ್ಥಿಗಳ ವರ್ತನೆ ಮೇಲೆ ಗಮನ
ಶಾಲಿನಿ ಅವ್ರು ಹಿರಿಯ ವಿದ್ಯಾರ್ಥಿಗಳ ನಡವಳಿಕೆಯನ್ನ ಗಮನಿಸಿದ್ದು, ಅವರ ನಡವಳಿಕೆಯು ತುಂಬಾ ಅಸಭ್ಯ ಮತ್ತು ಆಕ್ರಮಣಕಾರಿಯಾಗಿತ್ತು. ಹೀಗಾಗಿ ಶಾಲಿನಿ ತನ್ನ ಹಿರಿಯ ಅಧಿಕಾರಿಗಳಿಗೆ ಸಂಪೂರ್ಣ ವರದಿ ನೀಡಿದರು. ನಂತರ ಪೊಲೀಸರು 10 ವಿದ್ಯಾರ್ಥಿಗಳನ್ನ ಗುರುತಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 10 ವಿದ್ಯಾರ್ಥಿಗಳ ಪೈಕಿ 8 ಮಂದಿ ಜಾಮೀನು ಪಡೆದಿದ್ದಾರೆ. ಆದರೆ ಇದೀಗ ಪೊಲೀಸರು ಆರೋಪಿ ವಿದ್ಯಾರ್ಥಿಗಳ ವಿರುದ್ಧ ನ್ಯಾಯಾಲಯಕ್ಕೆ ಚಲನ್ ಸಲ್ಲಿಸಲಿದ್ದಾರೆ. ಆರೋಪಿಗಳಾದ ಪ್ರೇಮ್ ತ್ರಿಪಾಠಿ, ರಿಷಭ್ ರಾಜ್, ರಾಹುಲ್ ಪಟೇಲ್, ಉಜ್ವಲ್ ಪಾಂಡೆ, ರೌನಕ್ ಪಾಟಿದಾರ್, ಪ್ರಭಾತ್ ಸಿಂಗ್, ಕ್ರಪ್ರಾಂಶು ಸಿಂಗ್, ಚೇತನ್ ವರ್ಮಾ ಮತ್ತು ಇತರ ಇಬ್ಬರು ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.
ಇಡೀ ವಿಷಯ ಏನಾಗಿತ್ತು?
ಇಂದೋರ್ನ ಮಹಾತ್ಮ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳನ್ನ ರ್ಯಾಗಿಂಗ್ ಮಾಡಿದ ಪ್ರಕರಣ ಜುಲೈ 24 ರಂದು ಮುನ್ನೆಲೆಗೆ ಬಂದಿತ್ತು. ಕಿರಿಯ ವಿದ್ಯಾರ್ಥಿಗಳು ಆಯಂಟಿ ರ್ಯಾಗಿಂಗ್ ಸಹಾಯವಾಣಿ ಮೂಲಕ ಸಹಾಯ ಕೋರಿದರು. ಮೂರನೇ ವರ್ಷದ ವಿದ್ಯಾರ್ಥಿಗಳು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಹೊಡೆದು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಇನ್ನು ಹಿರಿಯ ವಿದ್ಯಾರ್ಥಿಗಳು ಅಸ್ವಾಭಾವಿಕ ಸಂಭೋಗಕ್ಕೆ ಒತ್ತಾಯಿಸಿದ್ದಾರೆ ಎಂದು ರ್ಯಾಗಿಂಗ್ ಸಂತ್ರಸ್ತರು ಆರೋಪಿಸಿದ್ದಾರೆ. ಇನ್ನು ವೈದ್ಯಕೀಯ ಕಾಲೇಜಿನ ಆಯಂಟಿ ರ್ಯಾಗಿಂಗ್ ಸೆಲ್ ಪ್ರಾಥಮಿಕ ವಿಚಾರಣೆ ನಡೆಸಿದ್ದು, ಆರೋಪ ನಿಜವೆಂದು ತಿಳಿದುಬಂದಿದೆ. ಬಳಿಕ ಸೂಕ್ತ ಕ್ರಮಕ್ಕಾಗಿ ಪೊಲೀಸರಿಗೆ ಪ್ರಕರಣ ಹಸ್ತಾಂತರಿಸಲಾಗಿದೆ.
ದೂರಿನ ನಂತರ 10 ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಂಯೋಗಿತಾ ಗಂಜ್ ಪೊಲೀಸ್ ಠಾಣೆ ಪ್ರಭಾರಿ ತಹಜೀಬ್ ಖಾಜಿ ತಿಳಿಸಿದ್ದಾರೆ. ನೊಂದ ವಿದ್ಯಾರ್ಥಿಗಳು ತಮ್ಮ ದೂರನ್ನು ಕಾಲೇಜಿನ ಬದಲು ದೆಹಲಿಯ ರ್ಯಾಗಿಂಗ್ ವಿರೋಧಿ ಸಮಿತಿಗೆ ಅರ್ಜಿಯ ಮೂಲಕ ಕಳುಹಿಸಿದ್ದಾರೆ ಎಂದು ಅವರು ಹೇಳಿದರು. ಇದಾದ ಬಳಿಕ ಡೀನ್ ಡಾ.ಸಂಜಯ್ ದೀಕ್ಷಿತ್ ಸೂಚನೆ ಮೇರೆಗೆ ರ್ಯಾಗಿಂಗ್ ವಿರೋಧಿ ಸಮಿತಿ ಸಭೆ ನಡೆಸಲಾಯಿತು. ನಂತರ ವಿಷಯ ಪೊಲೀಸರಿಗೆ ತಲುಪಿತು. ಸದ್ಯ ಈ ಪ್ರಕರಣದಲ್ಲಿ 8 ವಿದ್ಯಾರ್ಥಿಗಳನ್ನು ಕಸ್ಟಡಿಗೆ ಪಡೆದ ಬಳಿಕ ಜಾಮೀನು ಮಂಜೂರು ಮಾಡಲಾಗಿದೆ. ಇದೀಗ ಪೊಲೀಸರು ಆರೋಪಿ ವಿದ್ಯಾರ್ಥಿಗಳ ವಿರುದ್ಧ ನ್ಯಾಯಾಲಯಕ್ಕೆ ಚಲನ್ ಸಲ್ಲಿಸಲಿದ್ದಾರೆ.
ಇದೇ ವೇಳೆ ವಿದ್ಯಾರ್ಥಿಗಳ ರ್ಯಾಗಿಂಗ್ ಪ್ರಕರಣದ ಬಗ್ಗೆ ಎಂಜಿಎಂ ಮೆಡಿಕಲ್ ಡೀನ್ ಅವರಿಗೂ ಮಾಹಿತಿ ನೀಡಲಾಯಿತು. ರ್ಯಾಗಿಂಗ್ ವಿಚಾರವಾಗಿ ಡೀನ್ ಸಂಜಯ್ ದೀಕ್ಷಿತ್ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಏನನ್ನೂ ಹೇಳಿಲ್ಲ. ಆದರೆ ಆರೋಪಿ ವಿದ್ಯಾರ್ಥಿಗಳು ತಪ್ಪಿತಸ್ಥರೆಂದು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.