ಹಾಸನ: ವಿಧವೆಯ ಜೊತೆ ಮದುವೆಯಾಗಿರೊ ವಿಷಯ ಮುಚ್ಚಿಟ್ಟು 2ನೇ ಮದುವೆ ತಯಾರಿ ನಡೆಸಿದ್ದ ಯೋಧ ಕಿರಣ್ ಕುಮಾರ್ ಕೇಸ್ಗೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಂಟಪಕ್ಕೆ ಬಂದು ಮಹಿಳೆ ಮದುವೆ ನಿಲ್ಲಿಸಿದ್ರು. ಇದರಿಂದ ಮನನೊಂದ ಯೋಧಕಿರಣ್ ಕುಮಾರ್ ಮಹಿಳೆ ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಯೋಧ ಕಿರಣ್ ಮತ್ತು ಮೊದಲ ಪತ್ನಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ನಗರದ ಎಂ.ಹೊಸಕೊಪ್ಪಲು ನಿವಾಸಿ ಆಶಾ ಶಾಂತಿ ಗ್ರಾಮ ಬಳಿಯ ಅರಣ್ಯದಲ್ಲಿ ಒಂದೇ ಮರದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಕಿರಣ್ ಕುಮಾರ್ ಗೆ ವಿಧವೆ ಆಶಾ ಜೊತೆ ಪ್ರೇಮಾಂಕುರವಾಗಿತ್ತು. ಬಳಿಕ ದೇವರ ಫೋಟೊ ಮುಂದೆ ನಾಲ್ಕು ಗೋಡೆಯ ಮಧ್ಯೆ ಕಿರಣ್‌ಕುಮಾರ್, ಆಶಾಳಿಗೆ ತಾಳಿ ಕಟ್ಟಿ ಆಕೆಯೊಂದಿಗೆ ಸಂಸಾರ ಮಾಡಲು ಆರಂಭಿಸಿದ್ದ.ಆದರೆ ಮನೆಯವರಿಗೆ ಹೆದರಿ ಈ ವಿಷಯವನ್ನು ಹೇಳಿರಲಿಲ್ಲ.
ಮನೆಯವರು ಕಿರಣ್‌ಗೆ ಮದುವೆ ಮಾಡಲು ಮುಂದಾಗಿ ವಧು ನೋಡಿ ವಿವಾಹ ನಿಶ್ಚಯ ಮಾಡಿದ್ದಾರೆ. ವಿಷಯ ತಿಳಿದು ಅಲ್ಲಿಗೆ ಧಾವಿಸಿದ್ದ ಆಶಾ, ಮೊದಲ ಮದುವೆ ವಿಷಯವನ್ನು ಹೇಳಿ ಜಗಳ ಮಾಡಿದ್ದಾಳೆ.ಬಳಿಕ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಯೋಧ ಕಿರಣ್ ಕುಮಾರ್ನಿಂದ ತನಗಾದ ವಂಚನೆ ಬಗ್ಗೆ ಮಹಿಳೆ ಮದುವೆ ಮಂಟಪದಲ್ಲಿ ಹೇಳಿದ್ದಾಳೆ. ಬಳಿಕ ಹುಡುಗಿ ಮನೆಯವರು ಯೋಧನನ್ನು ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ವಿಷಯ ತಿಳಿದು ತಕ್ಷಣ ಸ್ಥಳೀಯ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ತಿಳಿಗೊಳಿಸಿದ್ದರು. ನಂತರ ಪೊಲೀಸರು ಎಲ್ಲರನ್ನೂ ಠಾಣೆಗೆ ಕರೆದೊಯ್ದು, ವಿಚಾರಣೆ ನಡೆಸಿದರು.
ನಂತರ ಪೊಲೀಸರ ಸಮ್ಮುಖದಲ್ಲಿ ರಾಜಿ ಸಂಧಾನವಾದ ಬಳಿಕ ಯೋಧ ಕಿರಣ್ ಕುಮಾರ್ ಮತ್ತು ಆಶಾ ಹೊಂಗೆರೆ ಅರಣ್ಯದ ಬಳಿ ತೆರಳಿದ್ದಾರೆ. ಅಲ್ಲಿ ತನ್ನ ಸಂಬಂಧಿಯೊಬ್ಬರಿಗೆ ವಾಟ್ಸಾಪ್ ಮೆಸೇಜ್ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಾಂತಿ ಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಈ ಸಂಬಂಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.