ಪುತ್ತೂರು: ವಸತಿ ನಿಲಯದಿಂದ ನಾಪತ್ತೆಯಾಗಿದ್ದ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಮೈಸೂರು ಮೂಲದ 15 ವರ್ಷದ ವಿದ್ಯಾರ್ಥಿಗಳು ಬೆಂಗಳೂರು ರೈಲು ನಿಲ್ದಾಣದಲ್ಲಿ ಪತ್ತೆ ಮಾಡಲಾಗಿದೆ. ಈ ಇಬ್ಬರು ವಿದ್ಯಾರ್ಥಿಗಳು ಸ್ಥಳೀಯ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಕಲಿಯುತ್ತಿದ್ದರು.
ನ.7 ರಂದು ಸಂಜೆ ವಿದ್ಯಾರ್ಥಿ ನಿಲಯದಿಂದ ನಾಪತ್ತೆಯಾಗಿದ್ದು ಪುತ್ತೂರು ನಗರದ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್‌ಐ ಸೇಸಮ್ಮ ನೇತೃತ್ವದಲ್ಲಿ ಪೊಲೀಸರ ತಂಡ ಹುಡುಕಾಟ ನಡೆಸಿದ್ದರು.
ಬಾಲಕರಿಬ್ಬರು ಪುತ್ತೂರು ರೈಲು ನಿಲ್ದಾಣದತ್ತ ತೆರಳಿರುವುದು ಸಿಸಿಟಿವಿಯಲ್ಲಿ ಕಂಡುಬಂದಿತ್ತು. ಹೀಗಾಗಿ ಒಂದು ಪೊಲೀಸ್ ತಂಡ ಸಕಲೇಶಪುರ, ಹಾಸನ, ಮೈಸೂರು, ಬೆಂಗಳೂರು ಕಡೆಗೆ ತೆರಳಿ ಹುಡುಕಾಟ ನಡೆಸಿತ್ತು.
ಅಲ್ಲದೆ, ಮಕ್ಕಳ ವಿವರಗಳನ್ನು ರೈಲ್ವೇ ಪೊಲೀಸ್, ಸಿಆರ್ ಪಿಎಫ್, ರೈಲ್ವೆ ಅಧಿಕಾರಿಗಳಿಗೆ ನೀಡಲಾಗಿತ್ತು. ಹುಡುಕಾಟದ ಮಧ್ಯೆ ಬೆಂಗಳೂರು ರೈಲು ನಿಲ್ದಾಣದಲ್ಲಿ ಇಬ್ಬರು ಬಾಲಕರು ಪತ್ತೆಯಾಗಿದ್ದು ರೈಲ್ವೇ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬಳಿಕ ಬೆಂಗಳೂರಿನ ಮಕ್ಕಳ ಸಹಾಯವಾಣಿ ಕೇಂದ್ರಕ್ಕೆ ಹಸ್ತಾಂತರಿಸಿದ್ದಾರೆ.