ಉಡುಪಿ: ಧಾರ್ಮಿಕ ದತ್ತಿ ಇಲಾಖೆ ಸ್ವಾಧೀನದಲ್ಲಿರುವ ಮುಜರಾಯಿ ದೇವಸ್ಥಾನಗಳಲ್ಲಿ ಪೀಠಾಧೀಶರು ಮುದ್ರಾಧಾರಣೆ ಮಾಡುವಂತಿಲ್ಲ ಎಂದು ಹೊರಡಿಸಲಾಗಿದ್ದ ಸರಕಾರಿ ಆದೇಶವನ್ನು ಹಿಂದೆ ಪಡೆದಿರುವುದಾಗಿ ರಾಜ್ಯ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಸರಕಾರದ ಹೊರಡಿಸಿದ ಈ ಆದೇಶಕ್ಕೆ ಮಾಧ್ವತತ್ತ್ವ ಅನುಯಾಯಿಗಳಿಂದ ಹಾಗೂ ವಿವಿಧ ಮಠಾಧೀಶರು ಗಳಿಂದ ತೀವ್ರ ಪ್ರತಿರೋಧ ಬಂದ ಹಿನ್ನೆಲೆಯಲ್ಲಿ ಸರಕಾರ ತನ್ನ ಆದೇಶವನ್ನು ವಾಪಾಸು ಪಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಉಡುಪಿ ಶಾಸಕ ರಘುಪತಿ ಭಟ್ ಮುದ್ರಾಧಾರಣೆಯ ಕುರಿತಂತೆ ಸಚಿವೆಗೆ ವಿವರಿಸಿದ್ದು, ಪೇಜಾವರ ಶ್ರೀಗಳು ಅದೇ ಸಂದರ್ಭದಲ್ಲಿ ಸಚಿವರ ಜೊತೆ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ.
ಮಾಹಿತಿ ಕೊರತೆಯಿಂದ ಆಗಿರುವ ಈ ಆದೇಶವನ್ನು ಹಿಂಪಡೆಯುವುದಾಗಿ ಪೇಜಾವರ ಶ್ರೀಗಳಿಗೆ ಹಾಗೂ ಉಡುಪಿ ಶಾಸಕ ರಘುಪತಿ ಭಟ್‌ಗೆ ಸಚಿವೆ ಶಶಿಕಲಾ ಜೊಲ್ಲೆ ಭರವಸೆ ನೀಡಿದ್ದು, ತಕ್ಷಣವೇ ಇಲಾಖಾ ಆಯುಕ್ತರಿಗೆ ಆದೇಶ ನೀಡುವುದಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.
ಒಂದಷ್ಟು ಅಸಮಾಧಾನ ಮತ್ತು ಚರ್ಚೆಗೆ ಕಾರಣವಾಗಿದ್ದ ಸುತ್ತೋಲೆಯನ್ನು ಮುಜರಾಯಿ ಇಲಾಖೆ ವಾಪಾಸ್ ಪಡೆದಿರುವುದಾಗಿ ಮುಜರಾಯಿ ಮಂತ್ರಿ ಶಶಿಕಲಾ ಜೊಲ್ಲೆ ತಿಳಿಸಿರುವುದನ್ನು ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥರು ಸ್ವಾಗತಿಸಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವೆ ಶಶಿಕಲಾ ಜೊಲ್ಲೆ ಮತ್ತು ಶಾಸಕ ಕೆ. ರಘುಪತಿ ಭಟ್ಟರಿಗೆ ಶ್ರೀಗಳು ಅಭಿನಂದನೆ ಸಲ್ಲಿಸಿದ್ದಾರೆ.