ಮುಲ್ಕಿ: ಇಲ್ಲಿನ ವಿಜಯ ಕಾಲೇಜು ಪಿಯುಸಿ ವಿದ್ಯಾರ್ಥಿ ತನ್ನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತ ವಿದ್ಯಾರ್ಥಿಯನ್ನು ಮುಲ್ಕಿ ಸಮೀಪದ ಕಕ್ವ ಪಲ್ಕೆ ನಿವಾಸಿ ಕಿಶನ್ ಆಚಾರ್ಯ (18) ಎಂದು ಗುರುತಿಸಲಾಗಿದೆ. ಮೃತ ವಿದ್ಯಾರ್ಥಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದು ಮಂಗಳವಾರ ಕಕ್ವದಲ್ಲಿರುವ ಪಕ್ಕದ ದೊಡ್ಡಪ್ಪನ ಮನೆಯ ಕೋಣೆಯಲ್ಲಿ ಕಿಟಿಕಿ ಗೆ ಸೀರೆಯ ಶಾಲಿನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆಗೆ ಬಲವಾದ ಕಾರಣ ತಿಳಿದು ಬಂದಿಲ್ಲ. ಈತ ಕಾಲೇಜಿನಲ್ಲಿ ಎಲ್ಲರ ಜೊತೆ ಒಡನಾಡಿಯಾಗಿದ್ದ ಎಂದು ತಿಳಿದು ಬಂದಿದೆ.
ಈ ನಡುವೆ ಪ್ರಕರಣದ ಬಗ್ಗೆ ದೂರು ನೀಡಲು ನೂತನ ಮನೆಯವರು ಹಾಗೂ ಸಂಬಂಧಿಕರು ತೆರಳಿದಾಗ ಮುಲ್ಕಿ ಪೊಲೀಸರು ಸತಾಯಿಸಿದ್ದಾರೆ ಎಂದು ಅತಿಕಾರಿಬೆಟ್ಟು ಗ್ರಾಪಂ ಅಧ್ಯಕ್ಷ ಮನೋಹರ ಕೋಟ್ಯಾನ್ ಆರೋಪಿಸಿದ್ದಾರೆ. ಬಳಿಕ ಶಾಸಕ ಸೂಚನೆ ಮೇರೆಗೆ ಪೊಲೀಸರು ದೂರನ್ನು ಸ್ವೀಕರಿಸಿದ್ದಾರೆ ಎಂದು ಅವರು ತಿಳಿಸಿದ್ದು ಪೊಲೀಸರು ಠಾಣೆಗೆ ದೂರು ನೀಡಲು ಹೋದರೆ ಬಡವರ ಅಸಹಾಯಕರ ವಿರುದ್ಧ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೃತ ಕಿಶನ್ ಆಚಾರ್ಯ ತಂದೆ ತಾಯಿ ಹಾಗೂ ಅಕ್ಕ ಅಗಲಿದ್ದಾರೆ. ಮೃತ ಕಿಶನ್ ಗೌರವಾರ್ಥ ಕಾಲೇಜಿಗೆ ರಜೆ ಘೋಷಿಸಲಾಗಿದೆ.