ರಿಷಬ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಮ್ಸ್ ‘ಕಾಂತಾರ’ ಸಿನಿಮಾದ ಯಶಸ್ಸಿನಿಂದ ಥ್ರಿಲ್ ಆಗಿದ್ದಾರೆ. ಕೇವಲ ಸುಮಾರು ಹದಿನೈದು ಕೋಟಿಯಲ್ಲಿ ನಿರ್ಮಿಸಿದ ಸಿನಿಮಾ 400 ಕೋಟಿಗೂ ಹೆಚ್ಚು ಹಣವನ್ನು ಚಿತ್ರಮಂದಿರಗಳಿಂದಲೇ ಕಲೆಕ್ಷನ್ ಮಾಡಿದೆ!
ಕರ್ನಾಟಕ ಮಾತ್ರವೇ ಅಲ್ಲದೆ ಹೊರ ರಾಜ್ಯಗಳಲ್ಲಿಯೂ ‘ಕಾಂತಾರ’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದೆ.
ನಿರೀಕ್ಷೆಗಿಂತಲೂ ಬಹುದೊಡ್ಡಮಟ್ಟದ ಗೆಲುವನ್ನು ಸಿನಿಮಾ ಕಂಡಿದೆ. ಇದಕ್ಕೆ ಚಿತ್ರತಂಡದ ಶ್ರಮದ ಜೊತೆಗೆ ದೈವದ ಆಶೀರ್ವಾದವೂ ಕಾರಣ ಎನ್ನಲಾಗುತ್ತಿದೆ.
ಇದೀಗ ‘ಕಾಂತಾರ 2’ ಸಿನಿಮಾದ ಮಾತುಕತೆ ಶುರುವಾಗಿದ್ದು, ‘ಕಾಂತಾರ 2’ ಸಿನಿಮಾ ಮಾಡಬಹುದೇ ಎಂದು ಸ್ವತಃ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ಚಿತ್ರತಂಡದವರು ದೈವದ ಅನುಮತಿಯನ್ನು ಕೇಳಿದ್ದಾರೆ. ಈ ಸಂದರ್ಭದಲ್ಲಿ ದೈವವು ಕೆಲವು ಎಚ್ಚರಿಕೆಗಳನ್ನು ಚಿತ್ರತಂಡಕ್ಕೆ ನೀಡಿದೆ.
ಮಂಗಳೂರು ನಗರ ಹೊರವಲಯದ ಬಂದಲೆಯ ಮನೆಯಲ್ಲಿ ನಡೆದ ಪಂಜುರ್ಲಿ ಕೋಲದಲ್ಲಿ ಕಾಂತಾರ ಚಿತ್ರತಂಡ ಭಾಗವಹಿಸಿದೆ. ಕದ್ರಿ ಮಂಜುನಾಥೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಕೃಷ್ಣ ಅಡಿಗ ಅವರ ಸಮ್ಮುಖದಲ್ಲಿ ನಡೆದ ಅಣ್ಣಪ್ಪ ಪಂಜುರ್ಲಿ ಕೋಲದಲ್ಲಿ ದೈವದ ಬಳಿ ರಿಷಬ್ ಶೆಟ್ಟಿ ದೈವದ ಬಳಿ ಕಾಂತಾರಾ ಭಾಗ 2 ನಿರ್ಮಾಣಕ್ಕೆ ಅನುಮತಿ ಕೇಳಿದೆ. ಈ ಸಂದರ್ಭದಲ್ಲಿ ಸಿನಿಮಾದ ನಿರ್ದೇಶಕ, ನಟ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು ಸೇರಿದಂತೆ ಇನ್ನು ಕೆಲವರು ಹಾಜರಿದ್ದರು.
‘ಕಾಂತಾರ’ ಭಾಗ 2 ಸಿನಿಮಾ ಮಾಡಲು ದೈವವು ಅನುಮತಿಯನ್ನು ನೀಡಿದೆ. ಆದರೆ ಕೆಲವು ಷರತ್ತುಗಳನ್ನು, ಎಚ್ಚರಿಕೆಯನ್ನು ದೈವ ನೀಡಿದೆ. ‘ಕಾಂತಾರ’ ಚಿತ್ರತಂಡಕ್ಕೆ ಅಭಯ ನೀಡಿರುವ ಅಣ್ಣಪ್ಪ ಪಂಜುರ್ಲಿ ‘ಮೊದಲು ಚಿತ್ರ ಮಾಡೋವಾಗ ಹತ್ತು ಬಾರಿ ಯೋಚನೆ ಮಾಡಿದ್ದೀರಿ, ಈ ಬಾರಿ ಮಾತ್ರ ನೂರು ಬಾರಿ ಯೋಚನೆ ಮಾಡಿ. ಮಾಡಿದ ಪ್ರಯತ್ನಕ್ಕೆ ಯಾವತ್ತೂ ಜಯ ಸಿಗುವ ರೀತಿ ಮಾಡುತ್ತೇನೆ. ಈ ಹಿಂದೆ ಇದ್ದ ತಂಡದ ಜೊತೆಗೆ, ಅಷ್ಟೇ ಶುದ್ಧಾಚಾರದಲ್ಲಿ ಮುಂದುವರಿಯಿರಿ’ ಅಂತಾ ದೈವ ಅಣ್ಣಪ್ಪ ಪಂಜುರ್ಲಿ ಕಾಂತಾರ ಚಿತ್ರತಂಡಕ್ಕೆ ಅಭಯ ನೀಡಿದೆ.