ಉಡುಪಿ: ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮೂರು ವರ್ಷಗಳ ಹಿಂದೆ ನಡೆದ ಪರಿಶಿಷ್ಟ ಪಂಗಡಕ್ಕೆ ಸೇರಿದ ಬಾಲಕಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿ ಪೋಕ್ಸೊ ಆರೋಪಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ದಲ್ಲಿನ ಪೋಕ್ಸೊ ತ್ವರಿತ ವಿಶೇಷ ನ್ಯಾಯಾಲಯವು ಜೀವಾವಧಿ ಜೈಲುಶಿಕ್ಷೆ ವಿಧಿಸಿ ಮಂಗಳವಾರ ಆದೇಶಿಸಿದೆ.
ಬೆಳ್ತಂಗಡಿ ತಾಲೂಕಿನ ವೇಣೂರು ನಿವಾಸಿ ರಾಧಾಕೃಷ್ಣ ಆಚಾರ್ಯ(26) ಶಿಕ್ಷೆಗೆ ಗುರಿಯಾದ ಆರೋಪಿ. 17 ವರ್ಷ ಪ್ರಾಯದ ನೊಂದ ಬಾಲಕಿಯನ್ನು 2019ರಲ್ಲಿ ಇನ್ ಸ್ಟಾಗ್ರಾಮ್ ಮೂಲಕ ಪರಿಚಯ ಮಾಡಿಕೊಂಡ ರಾಧಾಕೃಷ್ಣ ಆಚಾರ್ಯ, ಎಪ್ರಿಲ್ ತಿಂಗಳಲ್ಲಿ ಬಾಲಕಿಯ ಮನೆಗೆ ಯಾರು ಇಲ್ಲದ ವೇಳೆ ಬಂದಿದ್ದನು. ಆಕೆಯ ಮನೆಯ ಒಳಗೆ ಅಕ್ರಮ ಪ್ರವೇಶ ಮಾಡಿ, ಸಲುಗೆಯಿಂದ ಮಾತನಾಡಿ ಬಲತ್ಕಾರವಾಗಿ ದೈಹಿಕ ಲೈಂಗಿಕ ದೌರ್ಜನ್ಯ ಎಸಗಿದ್ದನು. ಅಲ್ಲದೆ ಈ ವಿಚಾರವನ್ನು ಯಾರಲ್ಲೂ ತಿಳಿಸದಂತೆ ಬೆದರಿಕೆ ಹಾಕಿದ್ದನು.
ಇದರಿಂದ ನೊಂದ ಬಾಲಕಿ ಗರ್ಭಿಣಿಯಾಗಿದ್ದು, ಈ ಬಗ್ಗೆ ವಿಚಾರಿಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ಅದರಂತೆ ನೊಂದ ಬಾಲಕಿಯ ತಾಯಿ ನೀಡಿದ ದೂರಿನಂತೆ ನೊಂದ ಬಾಲಕಿ ಪರಿಶಿಷ್ಟ ಪಂಗಡಕ್ಕೆ ಸೇರಿದವಳೆಂದು ತಿಳಿದೂ ಕೂಡ ದೌರ್ಜನ್ಯ ಎಸಗಿರುವುದರ ವಿರುದ್ಧ ಎಸ್‌ಸಿಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿಯೂ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಉಡುಪಿ ಡಿವೈಎಸ್ಪಿ ತನಿಖೆ ನಡೆಸಿದ್ದು, ಕಾರ್ಕಳ ಎಎಸ್ಪಿ ಪಿ.ಕೃಷ್ಣಕಾಂತ್ ಆರೋಪಿ ವಿರುದ್ಧ ದೋಷಾ ರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಒಟ್ಟು 30 ಸಾಕ್ಷಿಗಳ ಪೈಕಿ 18ಸಾಕ್ಷಿಗಳ ವಿಚಾರಣೆ ನಡೆಸಿದ ನ್ಯಾಯಾಧೀಶ ಶ್ರೀನಿವಾಸ ಸುವರ್ಣ, ಆರೋಪಿ ವಿರುದ್ಧ ಆರೋಪ ಸಾಬೀತಾಗಿರುವುದಾಗಿ ಅಭಿಪ್ರಾಯ ಪಟ್ಟು, ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 10ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದರು. ಅದೇ ರೀತಿ ಆರೋಪಿಗೆ ಕಲಂ 376ರ ಅಡಿ 10ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 10ಸಾವಿರ ರೂ. ದಂಡ, ಪೋಕ್ಸೊ 6ರಡಿಯಲ್ಲಿ 10ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 10ಸಾವಿರ ರೂ. ದಂಡ, ಪೊಕ್ಸೋ 4ರ ಅಡಿಯಲ್ಲಿ 10ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 10ಸಾವಿರ ರೂ. ದಂಡ, 354(ಎ) ಅಡಿಯಲ್ಲಿ 1ವರ್ಷ ಜೈಲು ಶಿಕ್ಷೆ ಮತ್ತು 1000ರೂ. ದಂಡ, 506 ಅಡಿಯಲ್ಲಿ 6 ತಿಂಗಳ ಜೈಲು ಶಿಕ್ಷೆ ಮತು 500ರೂ. ಅಕ್ರಮ ಪ್ರವೇಶಕ್ಕೆ 6 ತಿಂಗಳು ಕಠಿಣ ಶಿಕ್ಷೆ ಮತ್ತು 500ರೂ. ದಂಡ, ಎಸ್‌ಟಿಎಸ್‌ಸಿ ಕಾಯಿದೆಯಡಿ 10ಸಾವಿರ ರೂ. ದಂಡ ವಿಧಿಸಲಾಗಿದೆ.
ದಂಡದ ಒಟ್ಟು ಮೊತ್ತ 42ಸಾವಿರ ರೂ.ನಲ್ಲಿ 5ಸಾವಿರ ರೂ. ಸರಕಾರಕ್ಕೆ ಮತ್ತು ಉಳಿದ ಹಣ ನೊಂದ ಬಾಲಕಿಗೆ ಪರಿಹಾರವಾಗಿ ನೀಡಬೇಕು ಹಾಗೂ ಸರಕಾರ ನೊಂದ ಬಾಲಕಿಗೆ ಒಂದು ಲಕ್ಷ ರೂ. ಪರಿಹಾರ ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಪ್ರಾಸಿಕ್ಯೂಶನ್ ಪರವಾಗಿ ಉಡುಪಿ ಪೋಕ್ಸೊ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದಿಸಿದ್ದರು.