ಚಂಡೀಗಢ: ಕಳೆದ ನಾಲ್ಕು ತಿಂಗಳಿನಿಂದ ಕೇಳಿ ಬರುತ್ತಿದ್ದ ಭ್ರಷ್ಟಾಚಾರ ಆರೋಪ ಹಿನ್ನೆಲೆಯಲ್ಲಿ ಕೊನೆಗೂ ಪಂಜಾಬ್ ಸಚಿವ ಫೌಜಾ ಸಿಂ ಸರಾರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪಂಜಾಬ್ ತೋಟಗಾರಿಕೆ, ಆಹಾರ ಸಂಸ್ಕರಣೆ ಹಾಗೂ ರಕ್ಷಣಾ ಸೇವೆಗಳ ಕಲ್ಯಾಣ ಸಚಿವರಾಗಿದ್ದ ಅವರು ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ. ಮುಖ್ಯಮಂತ್ರಿಯವರು ಇದಕ್ಕೆ ಅನುಮೋದನೆ ನೀಡಿದ್ದಾರೆ. ಅಲ್ಲದೆ, ಸರಾರಿ ರಾಜೀನಾಮೆಯಿಂದ ತೆರವಾದ ಖಾತೆಯ ಜವಾಬ್ದಾರಿಯನ್ನು ಪಟಿಯಾಲ ಗ್ರಾಮೀಣ ಶಾಸಕ ಡಾ. ಬಲಬೀರ್ ಸಿಂಗ್ ಅವರಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಸರ್ಕಾರಿ ಅಧಿಕಾರಿಗಳ ಮೂಲಕ ಗುತ್ತಿಗೆದಾರರಿಂದ ಹಣ ವಸೂಲಿ ಮಾಡುತ್ತಿದ್ದಾರೆಂಬ ಆರೋಪ ಅವರ ಮೇಲೆ ಕೇಳಿ ಬಂದಿತ್ತು. ಈ ಕುರಿತ ಆಡಿಯೋ ಕ್ಲಿಪ್‌ವೊಂದನ್ನು ನಾಲ್ಕು ತಿಂಗಳ ಹಿಂದೆ ವಿಪಕ್ಷಗಳು ಬಿಡುಗಡೆ ಮಾಡಿದ್ದು, ಸರಾರಿ ರಾಜೀನಾಮೆ ನೀಡಬೇಕೆಂದು ಆಗ್ರಹಿಸುತ್ತಲೇ ಬಂದಿದ್ದವು.