ಉಡುಪಿ: ಬಾಲಕಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ-ತಪ್ಪಿತಸ್ಥನಿಗೆ 37 ವರ್ಷ ಕಠಿನ ಜೈಲು ಶಿಕ್ಷೆ ಪ್ರಕಟ

ಡುಪಿ: ಉಡುಪಿ ಮಹಿಳಾ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 2022ರಲ್ಲಿ ನಡೆದ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲಿನ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಎಸಗಿರುವ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿ ತಪ್ಪಿತಸ್ಥನಿಗೆ ಉಡುಪಿ ಹೆಚ್ಚುವರಿ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯವು ಒಟ್ಟು 37 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿ ಶನಿವಾರ ಆದೇಶ ನೀಡಿದೆ.

ಕೋಟ ನಿವಾಸಿ ಸಚಿನ್‌ ಪೂಜಾರಿ (26) ಶಿಕ್ಷೆಗೆ ಒಳಗಾದ ಆರೋಪಿ. ಈತ ನೊಂದ ಬಾಲಕಿಯ ಮನೆ ಕೆಲಸಕ್ಕೆ ಬರುತ್ತಿದ್ದವಳ ಸಂಬಂಧಿಕನಾಗಿದ್ದ. ಆಕೆಯಿಂದ ಬಾಲಕಿಯ ಮೊಬೈಲ್‌ ನಂಬರ್‌ ಪಡೆದುಕೊಂಡು ಮೊಬೈಲ್‌ನಲ್ಲಿ ಚಾಟಿಂಗ್‌ ಮಾಡಿ, ಬಾಲಕಿಯ ಅಶ್ಲೀಲ ಫೋಟೋವನ್ನು ತರಿಸಿಕೊಂಡಿದ್ದ. ಅದನ್ನು ವೈರಲ್‌ ಮಾಡುವುದಾಗಿ ಹೆದರಿಸಿ ನೊಂದ ಬಾಲಕಿಯಿಂದ ಹಲವು ಬಾರಿ ಲಕ್ಷಾಂತರ ರೂ. ಹಣವನ್ನು ಪಡೆದುಕೊಂಡಿದ್ದ. ಅದೇ ರೀತಿ ಚಿನ್ನಾಭರಣಗಳನ್ನು ತರಿಸಿಕೊಂಡು ಅದನ್ನು ತನ್ನ ಸ್ವಂತ ಉಪಯೋಗಕ್ಕೆ ಬಳಸಿ ಕೆಲವು ಚಿನ್ನಾಭರಣಗಳನ್ನು ಅಡವು ಇಟ್ಟಿದ್ದ.

ಅನಂತರ 2020ರ ಸೆಪ್ಟೆಂಬರ್‌ ಹಾಗೂ ನವೆಂಬರ್‌ ತಿಂಗಳಲ್ಲಿ ಆಕೆಯನ್ನು ಎರಡು ಮೂರು ಬಾರಿ ಬಲವಂತವಾಗಿ ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದ. ಮತ್ತೆ ಹಣ ಹಾಗೂ ಚಿನ್ನಾಭರಣ ನೀಡುವಂತೆ ಪೀಡಿಸುತ್ತಿದ್ದ. ಮನೆಯಿಂದ ಕಾಣೆಯಾಗುತ್ತಿರುವ ಚಿನ್ನಾಭರಣ, ಹಣವನ್ನು ಮನೆಯವರು ಹುಡುಕುವಾಗ ಬಾಲಕಿ ಈ ಎಲ್ಲ ಘಟನೆಯ ಬಗ್ಗೆ ಮನೆಯವರಿಗೆ ತಿಳಿಸಿದ್ದಳು. ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

24 ಸಾಕ್ಷಿಗಳ ವಿಚಾರಣೆ
ಈ ಬಗ್ಗೆ ತನಿಖೆ ನಡೆಸಿದ ಮಹಿಳಾ ಠಾಣಾ ಪ್ರಭಾರ ಪೊಲೀಸ್‌ ನಿರೀಕ್ಷಕ ಮಂಜುನಾಥ್‌ ಆರೋಪಿ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಒಟ್ಟು 42 ಸಾಕ್ಷಿಗಳ ಪೈಕಿ 24 ಸಾಕ್ಷಿಗಳ ವಿಚಾರಣೆ ನಡೆಸಿದ ನ್ಯಾಯಾಲಯ 50 ದಾಖಲೆಗಳನ್ನು ಪರಿಶೀಲಿಸಿತು. ನೊಂದ ಬಾಲಕಿಯ ಸಾಕ್ಷಿ ಮತ್ತು ಸಾಂದರ್ಭಿಕ ಸಾಕ್ಷಿ ಮತ್ತು ಆರೋಪಿಯಿಂದ ವಶಪಡಿಸಲಾದ ಚಿನ್ನಾಭರಣಗಳಿಂದ ಇತರ ಸಾಕ್ಷಿದಾರರೂ ಕೂಡ ಅಭಿಯೋಜನೆ ಪರವಾಗಿ ಸಾಕ್ಷಿ ನುಡಿದಿದ್ದು, ಅದರಂತೆ ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಅಭಿಪ್ರಾಯಪಟ್ಟರು.

ಬಾಲಕಿಗೆ 2 ಲಕ್ಷ ರೂ. ಪರಿಹಾರಕ್ಕೆ ಆದೇಶ
ಬಾಲಕಿಯನ್ನು ಅಪಹರಿಸಿದ್ದಕ್ಕೆ 5 ವರ್ಷ ಕಠಿನ ಜೈಲು ಶಿಕ್ಷೆ ಮತ್ತು 5,000 ರೂ. ದಂಡ, ಅತ್ಯಾಚಾರಕ್ಕೆ ಸಂಬಂಧಿಸಿ 10 ವರ್ಷ ಕಠಿನ ಶಿಕ್ಷೆ ಮತ್ತು 10 ಸಾವಿರ ರೂ. ದಂಡ, ಬಲವಂತವಾಗಿ ಹಣ ಮತ್ತು ಚಿನ್ನಾಭರಣ ಪಡೆದ ಪ್ರಕರಣಕ್ಕೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 3,000 ರೂ. ದಂಡ, ಬೆದರಿಕೆಗೆ ಒಂದು ವರ್ಷ ಜೈಲು ಶಿಕ್ಷೆ ಮತ್ತು 2 ಸಾವಿರ ರೂ. ದಂಡ, ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ 20 ವರ್ಷ ಜೈಲು ಶಿಕ್ಷೆ ಮತ್ತು 20 ಸಾವಿರ ರೂ. ದಂಡ ವಿಧಿಸಿ ಆದೇಶ ನೀಡಿದರು.

40 ಸಾವಿರ ರೂ. ದಂಡದ ಮೊತ್ತದಲ್ಲಿ 10 ಸಾವಿರ ರೂ. ಸರಕಾರಕ್ಕೆ ಮತ್ತು 30 ಸಾವಿರ ರೂ. ಸಂತ್ರಸ್ತೆಗೆ ನೀಡುವಂತೆ ಮತ್ತು ಸರಕಾರದಿಂದ ನೊಂದ ಬಾಲಕಿಗೆ 2 ಲಕ್ಷ ರೂ. ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶ ನೀಡಿದೆ. ಆರೋಪಿಯು ಎಲ್ಲ ಶಿಕ್ಷೆಯನ್ನು ಒಟ್ಟಾಗಿ ಅನುಭವಿಸುವಂತೆ ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. ಸರಕಾರದ ಪರವಾಗಿ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ.ರಾಘವೇಂದ್ರ ವಾದಿಸಿದ್ದರು.

Check Also

ಮಂಗಳೂರು : ಇನ್ನೊಬ್ಬರ ಜೀವ ಉಳಿಸಲು ಹೋಗಿ ತನ್ನ ಪ್ರಾಣವನ್ನೆ ತೆತ್ತ ಅರ್ಚನಾ ಕಾಮತ್…!!

ಮಂಗಳೂರು : ಇನ್ನೊಬ್ಬರ ಜೀವ ಉಳಿಸಲು ಹೋಗಿ ತನ್ನ ಮಹಿಳೆಯೊಬ್ಬರು ತನ್ನ ಪ್ರಾಣವನ್ನೇ ತೆತ್ತ ಹೃದಯವಿದ್ರಾವಕ ಘಟನೆ ನಡೆದಿದೆ. ಮೃತರನ್ನು …

Leave a Reply

Your email address will not be published. Required fields are marked *

You cannot copy content of this page.