ಉಡುಪಿ: ರಾಜ್ಯದ 25 ವಿವಿಧ ಜಾತಿಗಳ ಮೀಸಲಾತಿ ಸಂಬಂಧ ಒಂದು ತಿಂಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ 17 ಜಾತಿ ವರದಿ ಮುದ್ರಿಸಲಾಗಿದ್ದು, ಇನ್ನೂ 8 ಜಾತಿ ವರದಿ ಸಿದ್ಧವಾಗಿವೆ. ಜಾತಿಯೇ ಇಲ್ಲದ ಅನಾಥ ಮಕ್ಕಳಿಗೂ ಶಿಕ್ಷಣ, ಉದ್ಯೋಗದಲ್ಲಿ ಮೀಸಲಾತಿ ನೀಡುವಂತೆ ಶಿಫಾರಸು ಮಾಡಲಾಗುವುದು. ಅಲ್ಲದೆ ಕುಡುಬಿ ಜಾತಿಯನ್ನು ಬುಡಕಟ್ಟುವಿಗೆ ಸೇರಿಸಲು ಸರ್ಕಾರಕ್ಕೆ ವರದಿ ನೀಡುವುದಾಗಿ ತಿಳಿಸಿದರು.
ಪಕ್ಷ ಬಯಸಿದರೆ ಮತ್ತೆ ಸ್ಪರ್ಧೆ
ಪಕ್ಷ ಬಯಸಿದರೆ ತಾವು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಸಿದ್ಧ ಎಂದು ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಕೆಲ ಅಭಿಮಾನಿಗಳು ಮತ್ತೆ ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ. ಆದರೆ 2023ರ ನವೆಂಬರ್‌ವರೆಗೆ ತಮ್ಮ ಅಧಿಕಾರಾವಧಿ ಇದೆ. ಈ ಹುದ್ದೆಯಲ್ಲಿ ಸಾಕಷ್ಟುಒಳ್ಳೆಯ ಕೆಲಸಗಳನ್ನು ಮಾಡುವುದಕ್ಕೆ ಸಾಧ್ಯವಾಗಿದೆ. ಆಯೋಗದ ಹೊರತಾಗಿಯೂ ತಮ್ಮ ಕೆಲಸಗಳಿಗೆ ಜನರು ಈಗಲೂ ತಮ್ಮ ಬಳಿಗೆ ಬರುತ್ತಾರೆ. ಚುನಾಯಿತ ಪ್ರತಿನಿಧಿಯಾದರೆ ನೇರವಾಗಿ ಜನರ ಕೆಲಸ ಮಾಡಿಕೊಡುವುದಕ್ಕೆ ಅನುಕೂಲವಾಗುತ್ತದೆ ಎಂದರು.