ಸುಳ್ಯ: ತಾಲೂಕಿನ ಉಬರಡ್ಕ, ಮಿತ್ತೂರು, ಆಲೆಟ್ಟಿ, ಕುಕ್ಕುಜಡ್ಕ, ಕನಕಮಜಲು, ಅಜ್ಜಾವರ ಗ್ರಾಮಗಳಲ್ಲಿ ಜಾನುವಾರುಗಳಿಗೆ ಚರ್ಮ ಗಂಟು ರೋಗ ಇರುವುದು ಪತ್ತೆಯಾಗಿದೆ.
ಈ ಜಾನುವಾರುಗಳ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಅದು ಬಂದು ಬಳಿಕವಷ್ಟೇ ಚರ್ಮ ಗಂಟು ರೋಗವೇ ಎಂದು ತಿಳಿಯಲಾಗುವುದು.
ಅಲ್ಲಿಯವರೆಗೆ ಇದು ಶಂಕಿತ ಪ್ರಕರಣ. ಈಗ ಕಂಡು ಬಂದಿರುವ ಪ್ರಕರಣಗಳು ಮೇಲ್ನೋಟಕ್ಕೆ ಚರ್ಮ ಗಂಟು ರೋಗದಂತೆ ಇದೆ ಎಂದು ಸುಳ್ಯ ಪಶು ಸಂಗೋಪನಾ ಇಲಾಖೆಯ ವೈದ್ಯಾಧಿಕಾರಿ ಡಾ.ನಿತಿನ್ ಪ್ರಭು ತಿಳಿಸಿದ್ದಾರೆ.
ಸುಳ್ಯದ ಉಬರಡ್ಕ ಮಿತ್ತೂರು, ಆಲೆಟ್ಟಿ, ಕುಕ್ಕುಜಡ್ಕ, ಕನಕಮಜಲು, ಅಜ್ಜಾವರ ಗ್ರಾಮಗಳಲ್ಲಿ ಒಂದೊಂದು ಜಾನವಾರುಗಳಲ್ಲಿ ಪ್ರಕರಣ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಸೂಚನೆಯ ವರೆಗೆ ಮುಂದಿನ ಆದೇಶದ ವರೆಗೆ ಜಾನವಾರುಗಳನ್ನು ಸಾಗಾಟ ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ ಮತ್ತು ಜಾನುವಾರು ಸಾಕುವವರು ತಮ್ಮ ಜಾನುವಾರುಗಳನ್ನು ಮನೆಯಲ್ಲಿ ಕಟ್ಟಿ ಹಾಕಿಯೇ ಸಾಕಬೇಕು, ಮೇಯಲು ಬಿಡಬಾರದು ಎಂದು ಅವರು ವಿನಂತಿಸಿಕೊಂಡಿದ್ದಾರೆ.