ಮಂಗಳೂರು : ವಿಶೇಷ ಚೇತನ ಯುವತಿಯ ಶವವೊಂದು ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಯ ಸಾರಸ್ವತ ಕಾಲೊನಿಯ ಬಾಡಿಗೆ ಮನೆಯಲ್ಲಿ ನಡೆದಿದೆ. ಇದೀಗ ಕೊಲೆಯಾಗಿರುವ ಸಂಶಯ ವ್ಯಕ್ತವಾಗುತ್ತಿದೆ.
ಮೃತಪಟ್ಟಿರುವ ಯುವತಿಯನ್ನು ಛತ್ತೀಸಗಢದ ಸರಿತಾ ವರ್ಮ (23) ಎಂದು ಗುರುತಿಸಲಾಗಿದೆ. ಮೃತಪಟ್ಟ ಸರಿತಾ ಇಬ್ಬರು ಸಹೋದರರು ಹಾಗೂ ಅತ್ತಿಗೆ ಜೊತೆ ಸರಿತಾ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಜನವರಿ 30 ರಂದು ಸಂಜೆ ಪ್ರಕರಣ ಬೆಳಕಿಗೆ ಬಂದಿತ್ತು. ಘಟನೆ ವೇಳೆ ಸಹೋದರರಿಬ್ಬರು ಕೆಲಸಕ್ಕೆ ತೆರಳಿದ್ದರೆ, ಅತ್ತಿಗೆ ಆಸ್ಪತ್ರೆಗೆ ತೆರಳಿದ್ದರು. ಬಾಡಿಗೆ ಮನೆ ಮಾಲೀಕರು ವೃದ್ದರಾಗಿದ್ದು ಅಸೌಖ್ಯದಿಂದಿದ್ದಾರೆ. ಅವರು ಕೆಳಗಿನ ಅಂತಸ್ತಿನಲ್ಲಿ ಇದ್ದಾರೆ. ಮೇಲಿನ ಅಂತಸ್ತಿನಲ್ಲಿ ಸರಿತಾ ಅವರ ಕುಟುಂಬ ವಾಸವಾಗಿತ್ತು.
ಸರಿತಾ ವರ್ಮ ವಿಶೇಷ ಚೇತನರಾಗಿದ್ದು, ಶ್ರವಣ ದೋಷ ಹೊಂದಿದ್ದರು. ಸರಿತಾ ಬಾಯಿಗೆ ಬಟ್ಟೆಯನ್ನು ಬಿಗಿಯಾಗಿ ಕಟ್ಟಲಾಗಿದೆ. ಇದು ಸಂಶಯಕ್ಕೆ ಕಾರಣವಾಗಿದ್ದು, ಹತ್ಯೆ ನಡೆಸಿದ ಬಳಿಕ ಯುವತಿಯನ್ನು ನೇಣುಹಾಕಿರುವ ಸಾಧ್ಯತೆ ಇದೆ ಎಂದು ಉಳ್ಳಾಲ ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ಕೆಳಗಿನ ಮನೆಯಲ್ಲಿರುವ ವೃದ್ದ ಮಾಲೀಕರಿಗೆ ಯುವಕನೊಬ್ಬ ನಿತ್ಯ ಮಧ್ಯಾಹ್ನ ಹಾಗೂ ರಾತ್ರಿ ಊಟ ತರುತ್ತಾನೆ. ಸರಿತಾ ವರ್ಮ ಮೃತದೇಹ ಪತ್ತೆಯಾದ ದಿನದಂದು ಆತ ಮಾತ್ರ ಕಂಪೌಂಡ್ ಪ್ರವೇಶಿಸಿರುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಅಸಹಜ ಸಾವು ಪ್ರಕರಣ ದಾಖಲಿಸಿರುವ ಪೊಲೀಸರು ಸಂಶಯಾಸ್ಪದರನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ.