ಕಾರವಾರ: ಕಾಡುಹಂದಿ ಮಾಂಸವೆಂದು ಜನರನ್ನು ನಂಬಿಸಿ ಅವರಿಗೆ ನಾಯಿ ಮಾಂಸ ಮಾರಾಟ ಮಾಡುತ್ತಿದ್ದ ಪ್ರಕರಣ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಮೊಗಟಾ, ಹಿಲ್ಲೂರು ಭಾಗದಲ್ಲಿ ನಡೆದಿದ್ದು ನಾಯಿ ಮಾಂಸ ತಿನ್ನಿಸಿದ ಯುವಕರನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ.
ಮೊಗಟಾ ಹಾಗೂ ಹಿಲ್ಲೂರು ಭಾಗದಲ್ಲಿ ಅಲೆಮಾರಿ ಜನಾಂಗದ ಯುವಕರಿಬ್ಬರು ಕಾಡುಹಂದಿ ಮಾಂಸ ಎಂದು ಜನರನ್ನು ನಂಬಿಸಿ ನಾಯಿ ಮಾಂಸ ಮಾರಾಟ ಮಾಡುತ್ತಿದ್ದರು. ಹಣಕ್ಕಾಗಿ ಸುಳ್ಳು ಹೇಳಿ ಜನರನ್ನು ನಂಬಿಸಿ ಹತ್ತಾರು ಮನೆಗಳಿಗೆ ನಾಯಿ ಮಾಂಸವನ್ನು ತಿನ್ನಿಸಿದ್ದರು. ಆದರೆ ಯುವಕರು ನೀಡಿದ ಮಾಂಸ ಕಾಡು ಹಂದಿ ಮಾಂಸವಲ್ಲ ಎಂಬ ಬಗ್ಗೆ ಕೆಲವರಿಗೆ ಸಂಶಯ ಬಂದಿದೆ. ಯುವಕರು ಬೇರೆಡೆ ನಾಯಿಗಳನ್ನ ಹಿಡಿದು ಕೊಂದು ಮಾಂಸ ಮಾಡಿ ಮಾರಾಟ ಮಾಡುತ್ತಿದ್ದ ಬಗ್ಗೆಯೂ ಹಾಗೂ ಮಾಂಸಕ್ಕಾಗಿ ನಾಯಿ ಹಿಡಿಯುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
ನಾಯಿ ಮಾಂಸ ತಿನ್ನಿಸಿದ ಯುವಕರಿಗೆ ಬುದ್ಧಿ ಕಲಿಸಲು ಸಾರ್ವಜನಿಕರು ಮಾಂಸ ಖರೀದಿಸುವ ನೆಪದಲ್ಲಿ ಯುವಕರನ್ನು ಕರೆಸಿದ್ದಾರೆ. ಅದರಂತೆ ಯುವಕರು ಮಾಂಸ ಹಿಡಿದುಕೊಂಡು ಸ್ಥಳಕ್ಕೆ ಬಂದಿದ್ದಾರೆ. ಈ ವೇಳೆ ಯುವಕರಿಬ್ಬರನ್ನು ಪ್ರಶ್ನಿಸಿ ಹಿಗ್ಗಾಮುಗ್ಗ ಥಳಿಸಿದ್ದಾರೆ. ನಂತರ ಸಾರ್ವಜನಿಕರು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದುಬಂದಿದೆ.