ಲಕ್ನೋ: ಮದುವೆಯಾಗಿ 6 ವರ್ಷ ಕಳೆದರೂ ಮಕ್ಕಳಾಗಿಲ್ಲ ಅಂತಾ ತನ್ನ ಪತ್ನಿಗೆ ಚಿತ್ರಹಿಂಸೆ ಕೊಟ್ಟು ವಿಕೃತಿ ಮೆರೆದಿರುವ ಘಟನೆ ಉತ್ತರಪ್ರದೇಶದ ಲಕ್ನೋದಲ್ಲಿ ನಡೆದಿದೆ. ಪತ್ನಿಯೊಂದಿಗೆ ಅಸಹಜವಾಗಿ ವರ್ತಿಸಿರುವ ಪತಿ ಆಕೆಯ ಗುಪ್ತಾಂಗವನ್ನು ಬ್ಲೇಡ್‌ನಿಂದ ಕೊಯ್ದು ವಿಕೃತಿ ಮೆರೆದಿದ್ದಾನೆ.
ಪತ್ನಿ ತೀವ್ರ ಗಾಯಗೊಂಡ ಬಳಿಕ ಆಕೆಯನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಆರೋಪಿ ಪತಿಯನ್ನು ಲಕ್ನೋದ ಮೋಹನ್‌ಲಾಲ್‌ಗಂಜ್ ಪೊಲೀಸರು ಬಂಧಿಸಿದ್ದಾರೆ.
ಏನಿದುಘಟನೆ?: ದಂಪತಿಗೆ ಮದುವೆಯಾಗಿ 6 ವರ್ಷಗಳಾದರೂ ಮಕ್ಕಳಿರಲಿಲ್ಲ. ಇದರಿಂದ ಸಿಟ್ಟಿಗೆದ್ದ ಪತಿ, ಪತ್ನಿಗೆ ಚಿತ್ರಹಿಂಸೆ ನೀಡಲು ಪ್ರಾರಂಭಿಸಿದ್ದ. ನಿನ್ನೆ ಮದ್ಯದ ಅಮಲಿನಲ್ಲಿದ್ದ ಪತಿ, ಆಕೆಯ ಮೇಲೆ ಅಸ್ವಾಭಾವಿಕವಾಗಿ ವರ್ತಿಸಿದ್ದಾನೆ. ಆಕೆ ವಿರೋಧಿಸಲು ಮುಂದಾದಾಗ ಆಕೆಯ ಗುಪ್ತಾಂಗ ಹಾಗೂ ಎದೆಯ ಭಾಗಕ್ಕೆ ಬ್ಲೇಡ್‌ನಿಂದ ಹಲ್ಲೆ ನಡೆಸಿದ್ದಾನೆ.
ಪತಿಯ ಚಿತ್ರಹಿಂಸೆ ತಾಳಲಾರದೇ ಆಕೆ ತವರು ಮನೆಗೆ ಹೋಗಿದ್ದಾಳೆ. ಅಲ್ಲಿ ತನ್ನ ತಾಯಿಯೊಂದಿಗೆ ಘಟನೆ ಬಗ್ಗೆ ಹೇಳಿಕೊಂಡಿದ್ದಾಳೆ. ಬಳಿಕ ಆಕೆಯನ್ನು ಝಲ್ಕರಿ ಬಾಯಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಪತ್ನಿಯ ಸಹೋದರ ನೀಡಿದ ದೂರಿನ ಮೇರೆಗೆ ಕೇಸ್ (FIR) ದಾಖಲಿಸಿ ಕ್ರೂರಿ ಪತಿಯನ್ನ ಬಂಧಿಸಲಾಗಿದೆ. ಈ ಬಗ್ಗೆ ತನಿಖೆ ಮುಂದುವರಿಯುತ್ತಿದೆ ಎಂದು ದಕ್ಷಿಣ ವಲಯದ ಡಿಸಿಪಿ ರಾಹುಲ್ ರಾಜ್ ತಿಳಿಸಿದ್ದಾರೆ.