

ಜಲಾಭಿಷೇಕವಾದ ಬಳಿಕ ಸೀಯಾಳ ಅಭಿಷೇಕ, ಇಕ್ಷುರಸರದ ಅಭಿಷೇಕ, ಹಾಲಿನ ಅಭಿಷೇಕ, ಕಲ್ಕಚೂರ್ಣದ ಅಭಿಷೇಕ, ಅರಶಿನ ಅಭಿಷೇಕ,ಕಷಾಯದ ಅಭಿಷೇಕ,ಶುದ್ಧ ಕಾಶ್ಮೀರಿ ಕೇಸರಿಯ ಅಭಿಷೇಕ ಮತ್ತು ಚಂದನ ಅಭಿಷೇಕ ಹೀಗೆ ಎಲ್ಲಾ ದ್ರವ್ಯ ಗಳಿಂದ ಮಹಾಮಜ್ಜನಗೊಳಗಾದ ಬಾಹುಬಲಿ ಸೌಂದರ್ಯ ಇಮ್ಮಡಿಯಾಗಿದೆ.ಈ ಅಪರೂಪದ ಕ್ಷಣವನ್ನು ಸಾವಿರಾರು ಜನ ಕಣ್ತುಂಬಿಕೊಂಡಿದ್ದಾರೆ. ಈ ಅಭಿಷೇಕ ಪ್ರಕ್ರಿಯೆ ಮಧ್ಯರಾತ್ರಿಯವರೆಗೆ ನಡೆದರೂ ಭಕ್ತರು ಮಾತ್ರ ಒಂದಿಂಚೂ ಕದಲದೆ ತಂಪಾದ ರಾತ್ರಿಯಲ್ಲಿ ಬಾಹುಬಲಿಯ ಬದಲಾದ ಸೌಂದರ್ಯವನ್ನು ಭಕ್ತಿಪರವಶರಾಗಿ ಅನುಭವಿಸಿದ್ದಾರೆ.ಕೇವಲ ಜಿನ ಭಕ್ತರು ಮಾತ್ರವಲ್ಲದೆ ಜಾತಿ ಮತ ಧರ್ಮದ ಬೇಧ ಇಲ್ಲದೇ ಜನ ಈ ಮಸ್ತಕಾಭಿಷೇಕದ ಸಂಭ್ರಮದಲ್ಲಿ ಪಾಲ್ಗೊಳ್ಳೋದು ವಿಶೇಷವಾಗಿದೆ. ಪ್ರತಿದಿನ ಮೂರು ಸಾವಿರಕ್ಕೂ ಅಧಿಕ ಜನ ಫಲಾಹಾರ ಅನ್ನಪ್ರಸಾದವನ್ನು ಸ್ವೀಕರಿಸುತ್ತಿದ್ದು, ಜೈನ ಶೈಲಿಯ ಅಡುಗೆಗೆ ಜನ ವಾವ್ ಅಂದಿದ್ದಾರೆ. ಮೂವತ್ತೈದು ಅಡಿ ಎತ್ತರದ ಬಾಹುಬಲಿ ಕ್ರಿಸ್ತ ಶಕ 1603 ರಲ್ಲಿ ಪ್ರತಾಷ್ಠಿಪಿಸಲಾದರೂ ಈ ಬಾಹುಬಲಿ ಯನ್ನು ಕೆತ್ತಿರುವ ಶಿಲ್ಪಿ ಇಂದಿಗೂ ದೈವವಾಗಿ ತುಳುನಾಡಿನಲ್ಲಿ ಆರಾಧನೆಗೊಳ್ಳುತ್ತಿದ್ದಾನೆ.ವೇಣೂರು ಬಾಹುಬಲಿ ಮೂರ್ತಿಯ ಕೆತ್ತನೆಯ ಕಥೆಯೇನು?ಕಾರ್ಕಳದ ಗೋಮಟ ವಿಗ್ರಹಮಾಡಿದ ವೀರ ಶಂಭು ಕಲ್ಕುಡ ಕುಟುಂಬದವರನ್ನು ಕರೆಯಿಸಿ ವೇಣೂರಿನ ಸಮೀಪದ ಕಲ್ಯಾಣಿ ಎಂಬ ಸ್ಥಳದಲ್ಲಿ ಏಕಶಿಲೆಯಿಂದ ಗೋಮಟೇಶ್ವರ ಮೂರ್ತಿಯನ್ನು ಕೆತ್ತಿಸಿದನು.
ತುಳುನಾಡಿನ ಶಿಲ್ಪಿ ವೀರ ಶಂಭು ಕಲ್ಕುಡನು ವೇಣೂರು ಬಾಹುಬಲಿ ಮೂರ್ತಿಯನ್ನು ಒಂದು ಕೈ, ಒಂದು ಕಾಲಿನಿಂದ, ಒಂದು ರಾತ್ರಿ ಬೆಳಗಾಗುವುದರೊಳಗೆ ನಿರ್ಮಿಸಿ ಸ್ಥಾಪಿಸಿದನೆಂದು ತುಳುನಾಡಿನ ಸಂದಿ, ಪಾಡ್ದನಗಳಲ್ಲಿ ಹೇಳಲಾಗುತ್ತಿದೆ. ಮುಂದೆ ಇದೇ ಕಲ್ಕುಡ ತುಳುನಾಡಿನ ಮಹಿಮಾನ್ವಿತ ಶಕ್ತಿ ದೈವವಾಗಿ ನೆಲೆಯೂರಿ ಇಂದಿಗೂ ಭಕ್ತ ಜನರಿಂದ ಆರಾಧನೆಗೊಳಗಾಗುತ್ತಿದ್ದಾನೆ.ಫಲ್ಗುಣಿ ನದಿ ದಂಡೆಯಲ್ಲಿರುವ ಬಾಹುಬಲಿ ಮಂದಸ್ಮಿತ ಮೂರ್ತಿಯಾಗಿರೋದು ವಿಶೇಷವಾಗಿದೆ. ಎಲ್ಲಾ ಬಾಹುಬಲಿ ವಿಗ್ರಹಗಳೂ ಗುಡ್ಡ- ಬೆಟ್ಟದಲ್ಲಿ ಪ್ರತಿಷ್ಠಾಪಿಸಿದ್ದರೆ, ವೇಣೂರಿನ ಈ ಬಾಹುಬಲಿ ಮೂರ್ತಿ ಮಾತ್ರ ಭೂಮಟ್ಟದಲ್ಲಿಯೇ ಇದೆ. ಆದ್ದರಿಂದ ಸುಲಭದಲ್ಲಿ ಬಾಹುಬಲಿ ದರ್ಶನ ಮಾಡಬಹುದಾದ ಅಪರೂಪದ ಕ್ಷೇತ್ರವಾಗಿದೆ.ವೇಣೂರಿನಲ್ಲಿ ಈ ಹಿಂದೆ ಜೈನರ ಪ್ರಾಬಲ್ಯವಿತ್ತು.
ವೇಣೂರಿನಲ್ಲಿ 290 ವರ್ಷಗಳ ಹಿಂದೆ 770 ಜೈನ ಕುಟುಂಬಗಳು ವಾಸಿಸುತ್ತಿದ್ದವು ಎಂಬುವುದು ಜೈನ ಗ್ರಂಥದಲ್ಲಿ ಉಲ್ಲೇಖವಾಗಿದೆ. ಆ ಸಂದರ್ಭದಲ್ಲಿ ವೇಣೂರು ಬೃಹತ್ ವ್ಯಾಪಾರ ಕೇಂದ್ರವಾಗಿಯೇ ಗುರುತಿಸಲ್ಪಟ್ಟಿತು. ಈ ಗೋಮಟೇಶ್ವರ ಮಹಾ ಮೂರ್ತಿಗೆ 1928, 1956, 2000, 2012ರಲ್ಲಿ ಮಸ್ತಕಾಭಿಷೇಕ ಆದ ಬಳಿಕ ಹನ್ನೆರೆಡು ವರ್ಷದಬಳಿಕ ಮತ್ತೆ ಮಹಾಮಸ್ತಕಾಭಿಷೇಕದ ವೈಭವ ನಡೆಯುತ್ತಿದೆ.