ಉಳ್ಳಾಲ: ಅಕ್ರಮ ಮರಳು ಸಾಗಾಟ -ನಾಲ್ಕು ನಾಡ ದೋಣಿಗಳು ವಶಕ್ಕೆ

ಉಳ್ಳಾಲ ಸಮೀಪದ ಸೋಮೇಶ್ವರ ಉಚ್ಚಿಲದ ನಾಗತೋಟದಲ್ಲಿನ ಖಾಸಗಿ ಜಾಗದ ಮರಳು ಅಡ್ಡೆಗೆ ಸಿಸಿಬಿ ಪೊಲೀಸರು, ಭೂ ಮತ್ತು ಗಣಿ ವಿಜ್ಞಾನ ಅಧಿಕಾರಿಗಳು ಜಂಟಿಯಾಗಿ ದಾಳಿ ನಡೆಸಿದ್ದು ಅಪಾರ ಪ್ರಮಾಣದಲ್ಲಿ ದಾಸ್ತಾನಿರಿಸಿದ್ದ ಮರಳು ಮತ್ತು ಹೊಳೆಯಲ್ಲಿ ಮರಳು ಸಾಗಾಟ ನಡೆಸುತ್ತಿದ್ದ ನಾಲ್ಕು ನಾಡದೋಣಿಗಳನ್ನ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸೋಮೇಶ್ವರ ಉಚ್ಚಿಲದ ಬಟ್ಟಪ್ಪಾಡಿ ಸಮುದ್ರ ತೀರದಿಂದ ನಿತ್ಯವೂ ಅಕ್ರಮವಾಗಿ ಮರಳು ತೆಗೆದು ನಾಡ ದೋಣಿಗಳ ಮೂಲಕ ಹೊಳೆಯಲ್ಲಿ ಸಾಗಾಟ ನಡೆಸಿ ನಾಗತೋಟ ನಿವಾಸಿ ಮಹಮ್ಮದ್‌ ಆಲಿ ಅವರ ಖಾಸಗಿ ಜಮೀನಿನಲ್ಲಿ ದಾಸ್ತಾನು ಇರಿಸಲಾಗುತ್ತಿತ್ತು.ಈ ಮರಳನ್ನು ಮಧ್ಯ ರಾತ್ರಿ ಕೇರಳಕ್ಕೆ ಸಾಗಾಟ ನಡೆಸಲಾಗುತ್ತಿತ್ತು. ಈ ಮರಳು ಮಾಫಿಯಾ ಬಗ್ಗೆ ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಉಳ್ಳಾಲ ಠಾಣೆಗೆ ದೂರು ನೀಡಿದ್ದರೂ ಅಕ್ರಮ ಮರಳುಗಾರಿಕೆಗೆ ಕಡಿವಾಣ ಬಿದ್ದಿರಲಿಲ್ಲ. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ದೂರು ನೀಡಿದ್ದು, ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮರಳು ಅಡ್ಡೆಗೆ ದಾಳಿ ನಡೆಸಲಾಗಿದೆ ಎನ್ನಲಾಗಿದೆ.
ಸಿಸಿಬಿ ಪೊಲೀಸರೊಂದಿಗೆ ಗಣಿ, ಭೂ ವಿಜ್ಞಾನ ಅಧಿಕಾರಿಗಳ ತಂಡ ಬುಧವಾರ ನಾಗತೋಟದ ಅಕ್ರಮ ಮರಳು ಅಡ್ಡೆಗೆ ದಿಢೀರ್‌ ದಾಳಿ ನಡೆಸಿದ ಬಳಿಕ ಉಳ್ಳಾಲ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ಸೇರಿ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಐವರು ತಲೆಮರೆಸಿಕೊಂಡಿದ್ದಾರೆ.
ವಶ ಪಡಿಸಿಕೊಳ್ಳಲಾದ ಅಪಾರ ಪ್ರಮಾಣದ ಮರಳು ಮತ್ತು ನಾಡ ದೋಣಿಗಳನ್ನು ಪೊಲೀಸರು ಭೂ ಮತ್ತು ಗಣಿ ವಿಜ್ಞಾನ ಇಲಾಖಾಧಿರಿಗಳಿಗೆ ಹಸ್ತಾಂತರಿಸಿದ್ದಾರೆ. ಅಕ್ರಮ ಮರಳನ್ನು ದಾಸ್ತಾನು ಇರಿಸಲು ಸಹಕರಿಸುತ್ತಿರುವವರ ಜಮೀನನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸ್ಥಳೀಯರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.

Check Also

ಕೇರಳದಲ್ಲಿ ‘ವೆಸ್ಟ್‌ ನೈಲ್’ ಜ್ವರದ ಆತಂಕ- ದ.ಕ. ಜಿಲ್ಲೆಯಲ್ಲೂ ವಿಶೇಷ ನಿಗಾ

ಮಂಗಳೂರು: ನೆರೆಯ ಕೇರಳದ ಮಲಪ್ಪುರಂ, ಕೋಯಿಕ್ಕೋಡ್, ತೃಶೂರ್ ಪ್ರದೇಶದಲ್ಲಿ ‘ವೆಸ್ಟ್ ನೈಲ್’ ಜ್ವರ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ …

Leave a Reply

Your email address will not be published. Required fields are marked *

You cannot copy content of this page.