ಕಡಬ : ಹಣಕ್ಕೆ ಬೇಡಿಕೆಯಿಟ್ಟು ಸಹೋದರರನ್ನು ದುಷ್ಕರ್ಮಿಗಳ ತಂಡವೊಂದು ಅಪಹರಿಸಿ,ಕೊಲೆ ಬೆದರಿಕೆಯೊಡ್ಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೊಯಿಲಾ ಎಂಬಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಜನವರಿ.19 ರ ರಾತ್ರಿ ಈ ಘಟನೆ ನಡೆದಿದ್ದು, ಅಪಹರಣಕ್ಕೊಳಗಾದ ಸಹೋದರಲ್ಲಿ ಓರ್ವ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾದ ಹಿನ್ನಲೆಯಲ್ಲಿ ಘಟನೆ ಬೆಳಕಿಗೆ ಬಂದಿದೆ. ಕೊಯಿಲಾ ನಿವಾಸಿಯಾದ ನಿಝಾಮ್ ಎಂಬಾತನನ್ನು ಅಪಹರಿಸಿ ಜೆಸಿಬಿ ಸಿದ್ದೀಕ್ ಎಂಬಾತನ ತಂಡ ಈ ಕೃತ್ಯ ನಡೆಸಿರುವುದಾಗಿ ನಿಝಾಮ್ ಆರೋಪಿಸಿದ್ದು, ಆತನ ಸಹೋದರ ಶಾರೂಕ್ ನನ್ನು ಅಪಹರಣಕಾರರು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. 10 ಲಕ್ಷ ನೀಡಿದರೆ ಶಾರೂಖ್ ನನ್ನು ಬಿಡುಗಡೆಗೊಳಿಸುತ್ತೇವೆ, ಇಲ್ಲದೇ ಹೋದಲ್ಲಿ ಕೊಲೆ ನಡೆಸಿ ನೀರಿಗೆ ಎಸೆಯುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಜೆಸಿಬಿ ಸಿದ್ದೀಕ್ ನ ತಂಡ ಇಬ್ಬರನ್ನೂ ಮಂಗಳೂರಿನ ಮಲ್ಲೂರಿಗೆ ಕರೆದೊಯ್ದಿದ್ದು, ಶಾರೂಖ್ ನ ಪ್ರಾಣ ಅಪಾಯದಲ್ಲಿದೆ ಎಂದು ನಿಝಾಮ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಿಝಾಮ್ ಕಡಬ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.