ಮಂಗಳೂರು : ಟೀಂ ಇಂಡಿಯಾ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅತ್ಯಂತ ಯಶಸ್ವಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಇಂದು, ಖಾಸಗಿ ಕಾರ್ಯಕ್ರಮದ ನಿಮಿತ್ತ ಮಂಗಳೂರಿಗೆ ಬಂದಿಳಿದಿದ್ದಾರೆ. ಕ್ಯಾಪ್ಟನ್ ಕೂಲ್ ಖ್ಯಾತಿಯ ಧೋನಿ, ಮುಂಬೈನಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಹೌದು, ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ, ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿರುವ ಧೋನಿ, ಇದೀಗ ತಮ್ಮ ಸ್ನೇಹಿತ ಕಾಸರಗೋಡಿನ ಡಾ. ಶಾಜೀರ್ ಗಫಾರ್ ಅವರ ತಂದೆ ಪ್ರೊ ಕೆ.ಕೆ. ಅಬ್ದುಲ್ ಗಫಾರ್ ಅವರ ಜೀವನಾಧಾರಿತ ಆತ್ಮಕಥನ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗುವ ಸಲುವಾಗಿ ಧೋನಿ, ಮಂಗಳೂರಿಗೆ ಬಂದಿಳಿದಿದ್ದಾರೆ.
ಮಹೇಂದ್ರ ಸಿಂಗ್ ಧೋನಿಯನ್ನು ಮಾಜಿ ಸಚಿವ ಯು.ಟಿ ಖಾದರ್ ಅವರ ಸಹೋದರ, ಯು.ಟಿ. ಇಫ್ತಿಕಾರ್ ಅವರು ಮಂಗಳೂರು ಅಂತಾರಾಷ್ಟ್ರೀಯ ವಿಮಾನದಿಂದ ಬಂದಿಳಿಯುತ್ತಿದ್ದಂತೆಯೇ ಆತ್ಮೀಯವಾಗಿ ಬರಮಾಡಿಕೊಂಡರು. ಕಾಸರಗೋಡಿನ ಬೇಕಲ್ ನಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮವಿದ್ದು, ಸ್ವತಃ ಯು.ಟಿ ಇಫ್ತಿಕಾರ್, ಡ್ರೈವ್ ಮಾಡಿಕೊಂಡು ಧೋನಿಯವರನ್ನು ಕಾಸರಗೋಡಿಗೆ ಕರೆದೊಯ್ದರು. ಧೋನಿ ಮಂಗಳೂರು ಏರ್‌ಪೋರ್ಟ್‌ಗೆ ಬಂದಿಳಿಯುತ್ತಿದ್ದಂತೆಯೇ ಅವರ ಅಭಿಮಾನಿಗಳು ಸೆಲ್ಪಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು. ಇದಾದ ಬಳಿಕ ಭಾರೀ ಭದ್ರತೆಯೊಂದಿಗೆ ಧೋನಿ ಕಾಸರಗೋಡಿನತ್ತ ಪ್ರಯಾಣ ಬೆಳೆಸಿದರು.