ಕಡಬ: ಆ್ಯಸಿಡ್ ದಾಳಿ ಪ್ರಕರಣ; ಆರೋಪಿಯ ಚಲನವಲನ ಸಿಸಿಟಿವಿಯಲ್ಲಿ ಪತ್ತೆ

ಕಡಬ: ಸರ್ಕಾರಿ ಕಾಲೇಜಿನ ವಿದ್ಯಾರ್ಥಿನಿಯರ ಆ್ಯಸಿಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಎಂಬಿಎ ವಿದ್ಯಾರ್ಥಿ ಅಬಿನ್ ಸಿಬಿ ಕೃತ್ಯ ಎಸಗಲೆಂದು ಭಾನುವಾರ ಕೇರಳದಿಂದ ಮಂಗಳೂರಿಗೆ ರೈಲಿನಲ್ಲಿ ಬಂದಿದ್ದಾನೆ. ಬಳಿಕ ಕಡಬಕ್ಕೆ ಬಂದಿದ್ದ ಆತನ ಚಲನವಲನ ಅಲ್ಲಿನ ಬೇಕರಿಯೊಂದರ ಸಿಸಿಟಿವಿಯಲ್ಲಿ ಪತ್ತೆಯಾಗಿದೆ.

ಕೇರಳದ ಮಲಪ್ಪುರಂ ಜಿಲ್ಲೆಯ ನಿಲಂಬೂರು ತಾಲೂಕು ನಿವಾಸಿಯಾಗಿರುವ ಅಬಿನ್, ಭಾನುವಾರ ರಾತ್ರಿ ಮಂಗಳೂರು ರೈಲು ನಿಲ್ದಾಣಕ್ಕೆ ಬಂದಿದ್ದಾನೆ. ಸೋಮವಾರ ಬೆಳಿಗ್ಗೆಯವರೆಗೆ ರೈಲು ನಿಲ್ದಾಣದಲ್ಲೇ ಕಾಲ ಕಳೆದ ಆತ, ಬಳಿಕ ಮಂಗಳೂರಿನಿಂದ ಬಸ್ಸಿನ ಮೂಲಕ ಕಡಬಕ್ಕೆ ಆಗಮಿಸಿದ್ದಾನೆ. ಅಬಿನ್ ಸರ್ಕಾರಿ ಕಾಲೇಜಿನ ಸಮವಸ್ತ್ರವನ್ನು ಹೋಲುವ ಬಿಳಿ ಅಂಗಿ, ನೀಲಿ ಪ್ಯಾಂಟ್ ಧರಿಸಿ ಕಾಲೇಜು ಪ್ರವೇಶಿಸಿದ್ದಾನೆ. ಇದಕ್ಕೂ ಮುನ್ನ ಆತ ಕಡಬದ ಕೆಳಗಿನ ಬಸ್ ನಿಲ್ದಾಣದ ಬಳಿ ಬೇಕರಿಯಲ್ಲಿ ಬೆಳಗ್ಗಿನ ಜಾವ 8 ಗಂಟೆ ಸುಮಾರಿಗೆ ತನ್ನಲ್ಲಿದ್ದ ಎರಡು ಮೊಬೈಲ್ ಫೋನ್ ಗಳನ್ನು ಚಾರ್ಜ್ ಗೆ ಇಟ್ಟಿದ್ದ. ಈ ವೇಳೆ ಆರೋಪಿ ಕಪ್ಪು ಫ್ಯಾಂಟ್ ಹಾಗೂ ಕಪ್ಪು ಅಂಗಿ ಧರಿಸಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎನ್ನಲಾಗಿದೆ.

ಇನ್ನು ಬೇಕರಿಯಲ್ಲಿ ಫೋನ್ ಗಳನ್ನು ಚಾರ್ಜ್ ಗೆ ಇಟ್ಟ ಆರೋಪಿ ಅಬಿನ್ ಅಲ್ಲೇ ಒಂದು ಬ್ಯಾಗ್ ಬಿಟ್ಟಿದ್ದಾನೆ. ಆ ಬಳಿಕ ಬ್ಯಾಗಿನಿಂದ ಯಾವುದೋ ವಸ್ತುವನ್ನು ಪ್ಯಾಂಟ್ ಜೇಬಿಗೆ ಹಾಕಿ ಅಲ್ಲಿಂದ ಹೊರನಡೆಯುತ್ತಾನೆ. ಇದು ಆ್ಯಸಿಡ್ ಬಾಟಲ್ ಎನ್ನಲಾಗಿದೆ. ಬಳಿಕ ಆತ ಈ ಕಪ್ಪು ಬಣ್ಣದ ಬಟ್ಟೆಯನ್ನು ತಹಶಿಲ್ದಾರ್ ಕಚೇರಿ ಸಮೀಪದಲ್ಲಿರುವ ಕಟ್ಟಡವೊಂದರಲ್ಲಿ ಕಪ್ಪು ಬಣ್ಣದ ಬಟ್ಟೆ ಬಿಚ್ಚಿ ಅಲ್ಲಿಂದ ಕಾಲೇಜು ಸಮವಸ್ತ್ರ ಧರಿಸಿರಬೇಕು ಎಂದು ಅನುಮಾನಿಸಲಾಗಿದೆ. ಈ ಬಗ್ಗೆ ವಿವಿಧ ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪರೀಕ್ಷಾ ಹಾಲ್ ಪ್ರವೇಶಿಸುವ ಕೊನೆ ಕ್ಷಣದಲ್ಲಿ ಕೃತ್ಯ

ವಿದ್ಯಾರ್ಥಿಗಳೆಲ್ಲರೂ ಪರೀಕ್ಷಾ ಹಾಲ್ ಗೆ ತೆರಳುವ ತರಾತುರಿಯಲ್ಲಿರುವುದರಿಂದ ಹಾಗೂ ಶಿಕ್ಷಕರು ಪರೀಕ್ಷೆಗೆ ಕೊನೆ ಕ್ಷಣದ ತಯಾರಿಯಲ್ಲಿ ಮಗ್ನವಾಗಿರುವುದರಿಂದ ಕೃತ್ಯ ಎಸಗಿ ಪರಾರಿಯಾಗಬಹುದು ಎಂಬ ಹವಣಿಕೆಯಲ್ಲಿ ಈತ ಇದಕ್ಕಾಗಿಯೇ ಹಾಲ್ ಗೆ ತೆರಳುವ ಕೊನೆ ಕ್ಷಣವನ್ನೆ ಕೃತ್ಯಕ್ಕೆ ಆಯ್ಕೆ ಮಾಡಿದ್ದ. ಆದರೇ ಇಲ್ಲಿ ಮಾತ್ರ ಲೆಕ್ಕಾಚಾರ ವಿಫಲವಾಗಿದೆ.

ಸಂತ್ರಸ್ತ ವಿದ್ಯಾರ್ಥಿನಿಯರು ಕಲಿಯುತ್ತಿದ್ದ ಕಡಬದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಮಾರ್ಚ್ 1 ರಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಈ ವರ್ಷದ ಅಂತಿಮ ಪರೀಕ್ಷೆ ನಡೆಯುತ್ತಿದೆ. ಈ ಕಾಲೇಜು ಸೇರಿದಂತೆ ವಲಯದ 3 ಕಾಲೇಜಿನ ವಿದ್ಯಾರ್ಥಿಗಳಿಗೆ ಈ ಕಾಲೇಜು ಪ್ರಮುಖ ಪರೀಕ್ಷಾ ಕೇಂದ್ರವಾಗಿತ್ತು. ಈ ಹಿನ್ನೆಲೆ ಪರೀಕ್ಷೆ ಸಮಯ ಈ ಕಾಲೇಜಿಗೆ ಉಳಿದ ಕಾಲೇಜ್ ನ ಇತರ ವಿದ್ಯಾರ್ಥಿಗಳು ಬರುವ ಕಾರಣ ಈತನ ಬಗ್ಗೆ ಯಾರಿಗೂ ಅನುಮಾನ ಉಂಟಾಗಲು ಸಾಧ್ಯವಿಲ್ಲ. ಹೀಗಾಗಿ ಯಾರಿಗೂ ಅನುಮಾನ ಬಾರದಂತೆ ಕೃತ್ಯ ಎಸಗಲು ಈತ ಪರೀಕ್ಷಾ ದಿನವನ್ನೇ ಆಯ್ಕೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.

ಕಡಬದಿಂದಲೇ ಖರೀದಿಸಿದ್ದ ಆ್ಯಸಿಡ್

ಬೆಳಿಗ್ಗೆ 7.30ರ ಸುಮಾರಿಗೆ ಬಂದಿಳಿದ ಆರೋಪಿಯು ಬಳಿಕ ಕಡಬ ಪೇಟೆಯ ಅಂಗಡಿಯೊಂದರಿಂದಲೇ ಆ್ಯಸಿಡ್ ಖರೀದಿಸಿದ್ದ ಎನ್ನಲಾಗುತ್ತಿದೆ. ಈ ಬಗ್ಗೆ ಆರೋಪಿಯು ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ. ಆದರೆ ಈ ಸಮಯದಲ್ಲಿ ಕಡಬದಲ್ಲಿ ಯಾವುದೇ ಆ್ಯಸಿಡ್ ಅಂಗಡಿಗಳು ತೆರೆಯುವುದಿಲ್ಲ ಎಂದು ತಿಳಿದು ಬಂದಿದೆ. ಹಾಗಾದರೆ ಹಿಂದಿನ ದಿನವೇ ಈತ ಆ್ಯಸಿಡ್ ಖರೀದಿಸಿದ್ದನೇ ಎಂಬ ಸಂಶಯ ಮೂಡಿದೆ.

ಪರಿಚಯವಾಗಿ ಪ್ರೇಮಕ್ಕೆ ತಿರುಗಿತ್ತು

ಕಡಬ ತಾಲೂಕಿನ ರೆಂಜಲಾಡಿ ನಿವಾಸಿಯಾಗಿರುವ ಪ್ರಧಾನ ಸಂತ್ರಸ್ತೆಯನ್ನು ಕಳೆದ 2 ವರ್ಷಗಳಿಂದ ಆರೋಪಿ ಪೀತಿಸುತ್ತಿದ್ದ ಎನ್ನಲಾಗಿದೆ. ವಿದ್ಯಾರ್ಥಿನಿಯ ತಾಯಿ ಮೂಲತಃ ಕೇರಳದವರು. ಆರೋಪಿ ಅಬಿನ್ ಕೂಡಾ ಆಕೆಯ ಮನೆಯ ಹತ್ತಿರದ ನಿವಾಸಿ ಎನ್ನಲಾಗುತ್ತಿದ್ದರೂ ಅದು ಸುಳ್ಳು ಎಂಬ ಮಾಹಿತಿ ಲಭ್ಯವಾಗಿದೆ. ವಿದ್ಯಾರ್ಥಿನಿಯ ಸಂಬಂಧಿಕರು ಆರೋಪಿಯ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು. ಅವರ ಮುಖಾಂತರ ಸಂತ್ರಸ್ತ ವಿದ್ಯಾರ್ಥಿನಿಯ ಪರಿಚಯವಾಗಿ ಪ್ರೇಮಕ್ಕೆ ತಿರುಗಿತ್ತು. ಈ ವಿಚಾರ ಯುವತಿಯ ತಾಯಿಗೆ ಗೊತ್ತಾಗಿ ಇದನ್ನು ಆಕ್ಷೇಪಿಸಿದ್ದರು. ಇದೇ ಕಾರಣಕ್ಕೆ ಯುವತಿ ಈತನನ್ನು ಉಪೇಕ್ಷೆ ಮಾಡುತ್ತಿದ್ದಳು ಎನ್ನಲಾಗಿದೆ. ಇದರಿಂದ ಕೋಪಗೊಂಡ ಆರೋಪಿ ಆ್ಯಸಿಡ್ ದಾಳಿಯ ಕೃತ್ಯ ನಡೆಸಿದ್ದಾನೆ ಎಂದು ಪೋಲೀಸ್ ಮೂಲದಿಂದ ತಿಳಿದು ಬಂದಿದೆ. ಆದರೆ ಘಟನೆ ಬಗ್ಗೆ ಹಲವಾರು ಊಹಾಪೋಹಗಳು ಉಂಟಾಗಿದ್ದು, ಪೊಲೀಸರ ತನಿಖೆಯಿಂದ ಹಲವು ವಿಚಾರಗಳು ಬೆಳಕಿಗೆ ಬರಬೇಕಿದೆ.

Check Also

ಮಂಗಳೂರು : ತುಳುನಾಡ್ ಟ್ರಸ್ಟ್ (ರಿ) ಇದರ ವತಿಯಿಂದ ಕಾರ್ಗಿಲ್ ವಿಜಯೋತ್ಸವ ಆಚರಣೆ

ಮಂಗಳೂರು : ಇಂದು ನಗರದ ಕೆಪಿಟಿಯ ಕದ್ರಿ ಬಳಿ ಇರುವ ವೀರ ಯೋಧರ ಸ್ಮಾರಕ ಭವನದಲ್ಲಿ ನಮ್ಮ ತುಳುನಾಡ್ ಟ್ರಸ್ಟ್ …

Leave a Reply

Your email address will not be published. Required fields are marked *

You cannot copy content of this page.